

ಬೀದರ್: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದ್ದಾರೆ.
ಬ್ಯಾಂಕ್ ವ್ಯಾಪ್ತಿಯ ಜಿಲ್ಲೆಯ 183 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸರ್ಕಾರ ವಿಮೆಗೆ ಗುರುತಿಸಿರುವ ಬೆಳೆಗಳ ಕುರಿತು ತಿಳಿದು ನೋಂದಣಿ ಮಾಡಿಕೊಂಡು ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಹತ್ತು ದಿನ ನಿರಂತರ ಮಳೆಯಾಗಿದೆ. ತೇವಾಂಶ ಹೆಚ್ಚಾಗಿ ಬೆಳೆಗಳ ಬೆಳವಣಿಗೆ ಕುಂಠಿತವಾಗುತ್ತಿದೆ. ಅಲ್ಲದೆ ಸೋಯಾಬೀನ್ ಸೇರಿ ವಿವಿಧ ಬೆಳೆಗಳಲ್ಲಿ ಕೀಟಬಾಧೆ ಕಾಣಿಸಿಕೊಂಡಿದೆ. ಹೀಗಾಗಿ ವಿಮೆ ಮಾಡಿಸುವುದು ಉತ್ತಮ. ವಿಮೆ ನೋಂದಣಿಗೆ 31 ಕೊನೇ ದಿನವಾಗಿದೆ ಎಂದು ಹೇಳಿದ್ದಾರೆ.
ವಿಮೆ ನೋಂದಣಿಯಲ್ಲಿ ಬೀದರ್ ಜಿಲ್ಲೆ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಆರು ವರ್ಷಗಳಲ್ಲಿ ಡಿಸಿಸಿ ಬ್ಯಾಂಕ್ ಮೂಲಕ ಬೆಳೆ ವಿಮೆ ರೈತರ ಪಾಲಿನ ಪ್ರೀಮಿಯಂ ಮೊತ್ತ 64.53 ಕೋಟಿ ರೂ. ವಿಮಾ ಕಂಪನಿಗೆ ಪಾವತಿಸಿದ್ದು, ಆಯಾ ಋತುಮಾನಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಬೆಳೆ ನಷ್ಟವಾಗಿದ್ದರಿಂದ ವಿಮೆ ಮಾಡಿಸಿದ ಜಿಲ್ಲೆಯ ರೈತರ ಖಾತೆಗಳಿಗೆ 376.02 ಕೋಟಿ ರೂ. ಬೆಳೆ ವಿಮೆ ಮೊತ್ತ ನೇರವಾಗಿ ಜಮೆ ಆಗಿದೆ ಎಂದು ತಿಳಿಸಿದ್ದಾರೆ.
ಕೆಲ ಗ್ರಾಮಗಳಲ್ಲಿ ಖಾಸಗಿ ವ್ಯಕ್ತಿಗಳು ರೈತರಿಂದ ಅರ್ಜಿಗೆ 50-100 ರೂ. ಪಡೆಯುತ್ತಿರುವುದು ಗೊತ್ತಾಗಿದೆ. ರೈತರು ಮೋಸಕ್ಕೆ ಒಳಗಾಗದೆ ಅರ್ಜಿಗಳನ್ನು ಸಮೀಪದ ಡಿಸಿಸಿ ಬ್ಯಾಂಕ್ ಶಾಖೆ ಅಥವಾ ಪಿಕೆಪಿಎಸ್ ಗಳಿಗೆ ಭೇಟಿ ನೀಡಿ ಅರ್ಜಿ ಪಡೆದು ವಿಮೆ ನೋಂದಣಿ ಮಾಡಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.