ಬೆಳೆಗಳಿಗೆ ಯೂರಿಯಾ ಅಭಾವ

9 RNR 01
Published on

ಕರಿಯಪ್ಪ ಅರಳೀಕಟ್ಟಿ ರಾಣೆಬೆನ್ನೂರ

ತಾಲೂಕಿನಲ್ಲಿ ಕಳೆದ ಎರಡು ವಾರದಿಂದ ಉತ್ತಮ ಮಳೆಯಾಗುತ್ತಿದೆ. ವಾಣಿಜ್ಯ ನಗರಿಯ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ ಹಾಗೂ ಇತರ ಬೆಳೆಗಳು ಅಚ್ಚುಕಟ್ಟಾಗಿ ಬೆಳೆಯುತ್ತಿವೆ. ಆದರೆ, ತಾಲೂಕಿನಲ್ಲಿ ಬೆಳೆಗಳಿಗೆ ಅಗತ್ಯವಾಗಿರುವ ಯೂರಿಯಾ ಗೊಬ್ಬರದ ಕೊರತೆ ಉಂಟಾಗಿದೆ.

ರೈತರು ಯೂರಿಯಾ ಗೊಬ್ಬರ ಪಡೆದುಕೊಳ್ಳಲು ಸಹಕಾರ ಸಂಘಗಳ ಎದುರು ನಸುಕಿನ ಜಾವ 4 ಗಂಟೆಗೆ ಬಂದು ಸರತಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಜಮೀನಿನಲ್ಲಿನ ಕೃಷಿ ಕಾಯಕ ಬಿಟ್ಟು ಗೊಬ್ಬರಕ್ಕಾಗಿ ಅಲೆದಾಡಬೇಕಾಗಿದೆ. ಇದರ ನಡುವೆ ರೈತರಿಗೆ ಸಮರ್ಪಕವಾಗಿ ಗೊಬ್ಬರ ವಿತರಣೆ ಮಾಡಬೇಕಾದ ಕೃಷಿ ಅಧಿಕಾರಿಗಳು ಮಾತ್ರ ಇದಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ.

42 ಸಾವಿರ ಹೆಕ್ಟೇರ್ ಮೆಕ್ಕೆಜೋಳ: ತಾಲೂಕಿನಲ್ಲಿ ಮೆಕ್ಕೆಜೋಳ ಬೆಳೆ ಪ್ರಮುಖವಾಗಿದ್ದು, ಪ್ರಸಕ್ತ ವರ್ಷ 42 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಈಗಾಗಲೇ ಬಿತ್ತನೆ ಮಾಡಿ ಒಂದೊವರೆ ತಿಂಗಳು ಕಳೆದಿದ್ದು, ಬೆಳೆಗಳು ಉತ್ತಮವಾಗಿವೆ. ಹದಬರಿತವಾದ ಮಳೆಯಾಗುವ ಹಿನ್ನೆಲೆಯಲ್ಲಿ ಬೆಳೆಗಳಿಗೆ ಸದ್ಯ ಯೂರಿಯಾ ಗೊಬ್ಬರ ಹಾಕಬೇಕಿದೆ. ಆದರೆ, ತಾಲೂಕಿನಲ್ಲಿ ಸಮಪರ್ಕವಾಗಿ ಗೊಬ್ಬರ ಸಿಗದಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಕೊರತೆಯಾದ ಯೂರಿಯಾ: ತಾಲೂಕಿನಲ್ಲಿ ಮುಂಗಾರು ಹಂಗಾಮಿಗೆ ಸೆಪ್ಟೆಂಬರ್ ತಿಂಗಳವರೆಗೆ ಒಟ್ಟು 8650 ಟನ್ ಯೂರಿಯಾ ಗೊಬ್ಬರ ಅಗತ್ಯವಿದೆ. ಇದರಲ್ಲಿ ಈಗಾಗಲೇ 6655 ಟನ್ ಪೂರೈಕೆಯಾಗಿದೆ. ಈ ಗೊಬ್ಬರದಲ್ಲಿ 5525 ಟನ್ ಖಾಸಗಿ ಮಾರಾಟಗಾರರಿಗೆ ಹಾಗೂ 1140 ಟನ್ ಸಹಕಾರ ಸಂಘಗಳಿಗೆ ನೀಡಲಾಗಿದೆ. ಇನ್ನೂ 2015 ಟನ್ ಬೇಕಾಗಿದ್ದು, ಸದ್ಯ 200 ಟನ್ ಮಾತ್ರ ತಾಲೂಕಿಗೆ ಪೂರೈಕೆಯಾಗಿದೆ. ಹೀಗಾಗಿ, ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಯೂರಿಯಾ ಗೊಬ್ಬರ ಅಭಾವ ಸೃಷ್ಟಿಯಾಗುತ್ತಿದೆ. ರೈತರು ಗೊಬ್ಬರಕ್ಕಾಗಿ ಅಂಗಡಿಗಳಿಗೆ, ಸಹಕಾರ ಸಂಘಗಳಿಗೆ ಅಲೆದಾಡುವಂತಾಗಿದೆ. ನಸುಕಿನ ಜಾವ 4 ಗಂಟೆಯಿಂದ ಸರದಿ ಸಾಲಿನಲ್ಲಿ ನಿಂತ ರೈತರಿಗೆ ಗೊಬ್ಬರ ದೊರೆಯದೇ ಇರುವುದು ರೈತರನ್ನು ಕೆರಳಿಸಿದೆ.

ತಾಲೂಕಿನಲ್ಲಿ ಸದ್ಯ 200 ಟನ್ ರಸಗೊಬ್ಬರ ಪೂರೈಕೆಯಾಗಿದೆ. ಒಂದು ವಾರದಲ್ಲಿ 700 ಟನ್ ಗೊಬ್ಬರ ಬರುವ ನಿರೀಕ್ಷೆಯಿದೆ. ಈ ಬಾರಿ ಹೆಚ್ಚು ಮಳೆಯಾದ ಪರಿಣಾಮ ರೈತರು ಬೆಳೆಗಳಿಗೆ ಎರಡು ಬಾರಿ ರಸಗೊಬ್ಬರ ನೀಡುತ್ತಿರುವ ಪರಿಣಾಮ ಗೊಬ್ಬರದ ಅಭಾವ ಸೃಷ್ಟಿಯಾಗುತ್ತಿದೆ. ತಾಲೂಕಿನಲ್ಲಿ ರಸಗೊಬ್ಬರವನ್ನು ಮಾರುಕಟ್ಟೆಯ ಬೆಲೆಗಿಂತ ಹೆಚ್ಚು ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. | ಸ್ಪೂರ್ತಿಜಿಲ್ಲಾ ಕೃಷಿ ಉಪ ನಿರ್ದೇಶಕಿ ರಾಣೆಬೆನ್ನೂರ

ಅಕ್ರಮ ದಾಸ್ತಾನು ಆರೋಪ: ಖಾಸಗಿ ಅಂಗಡಿಗಳಿಗೆ ಮಾರಾಟ ಮಾಡಲು ನೀಡಿದ ಯೂರಿಯಾ ಗೊಬ್ಬರವನ್ನು ಕೆಲವರು ಅಕ್ರಮವಾಗಿ ದಾಸ್ತಾನು ಮಾಡಿಕೊಂಡಿದ್ದು, 260 ರೂ. ಬೆಲೆಯ ಗೊಬ್ಬರಕ್ಕೆ 350ರಿಂದ 400 ರೂ.ಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಈ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ಜಿ.ಪಂ. ಸದಸ್ಯ ಏಕನಾಥ ಭಾನುವಳ್ಳಿ ಅವರು ‘ಸ್ವತಃ ನಾನೇ 350 ರೂ.ಗೆ ಒಂದು ಪ್ಯಾಕೇಟ್​ನಂತೆ ಗೊಬ್ಬರ ಖರೀದಿ ಮಾಡಿದ್ದೇನೆ’ ಎಂದು ಆರೋಪಿಸಿದ್ದರು. ಆಗ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಕೃಷಿ ಅಧಿಕಾರಿಗಳು ಈವರೆಗೂ ಸುಮ್ಮನೆ ಕುಳಿತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net