

ದಾವಣಗೆರೆ: ರಾಜ್ಯ ಸರ್ಕಾರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿ ಮೂಲಕ ರೈತರ ರಕ್ಷಣೆಗೆ ಧಾವಿಸಬೇಕೆಂದು ರಾಜ್ಯ ರೈತ ಸಂಘ, ಹಸಿರು ಸೇನೆ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಒತ್ತಾಯಿಸಿದರು.
ಜಗಳೂರು ತಾಲೂಕಿನ ಚಿಕ್ಕಬನ್ನಿಹಟ್ಟಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯ ರೈತ ಸಂಘ, ಹಸಿರುಸೇನೆ ಗ್ರಾಮ ಘಟಕ ನಾಮಫಲಕ ಅನಾವರಣಗೊಳಿಸಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು.
ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸುವ ಪ್ರತ್ಯೇಕ ಕಾಯ್ದೆ ಜಾರಿಗೆ ಆಗ್ರಹಿಸಿ ವರ್ಷಗಟ್ಟಲೇ ಹೋರಾಟ ಮಾಡಿದರೂ ಕೇಂದ್ರ ಸರ್ಕಾರ ಕಿವಿಗೊಡಲಿಲ್ಲ. ಹೀಗಾಗಿರೈತರು ಸಾಯುವ ಸ್ಥಿತಿ ಇದೆ. ಹೋರಾಟಕ್ಕೆ ಬೆಂಬಲಿಸಿ ಕನಿಷ್ಠ ಬೆಂಬಲ ಬೆಲೆ ಕಾನೂನಿಗೆ ಆಗ್ರಹಿಸಿದ್ದ ಕಾಂಗ್ರೆಸ್ ಈಗ ಅಧಿಕಾರದಲ್ಲಿದೆ. ರಾಜ್ಯ ವ್ಯಾಪ್ತಿಗಾದರೂ ಈ ಕಾನೂನು ಅನುಷ್ಠಾನಗೊಳಿಸಲಿ ಎಂದು ಹೇಳಿದರು.
ಜಗಳೂರು ತಾಲೂಕು ಶಾಶ್ವತ ಬರಪೀಡಿತ ಎಂಬ ಹಣೆಪಟ್ಟಿ ಹೊತ್ತು ಶತಮಾನಗಳೇ ಕಳೆದಿವೆ. ಇಲ್ಲಿನ ಬೆಸ್ಕಾಂ ಅಧಿಕಾರಿಗಳು ರೈತರ ಪಂಪ್‌ಸೆಟ್‌ಗಳ ವಿದ್ಯುತ್ ಪರಿವರ್ತಕಗಳು ಸುಟ್ಟಾಗ ಲಂಚ ಕೊಟ್ಟರೆ ಅವುಗಳನ್ನು ಬದಲಾಯಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಬೆಳೆಗಳು ಹಾಳಾಗುತ್ತಿವೆ. ಬೆಸ್ಕಾಂ ಅಧಿಕಾರಿಗಳು ಇನ್ನು ಮುಂದೆ ಟಿಸಿ ಸುಟ್ಟ ತಕ್ಷಣ ಹೊಸ ಟಿಸಿ ಕೊಡಬೇಕು ಎಂದು ಆಗ್ರಹಿಸಿದರು.
ಕೊಂಡುಕುರಿ ಅಭಯಾರಣ್ಯ ಅಕ್ಕಪಕ್ಕದಲ್ಲಿ ವ್ಯವಸಾಯ ಮಾಡುವ ರೈತರಿಗೆ ರಾತ್ರಿ ವೇಳೆ ವಿದ್ಯುತ್ ನೀಡುವುದರಿಂದ ಚಿರತೆ, ಕರಡಿ ಇತರೆ ಕಾಡು ಪ್ರಾಣಿಗಳ ದಾಳಿಗೆ ಹೆದರಿ ವ್ಯವಸಾಯವನ್ನೇ ಬಿಡುವ ಸ್ಥಿತಿ ಇದೆ. ಹೀಗಾಗಿ ಅಲ್ಲಿನ ರೈತರಿಗೆ ಹಗಲು ವೇಳೆಯಲ್ಲಿಯೇ ಕನಿಷ್ಠ 5 ಗಂಟೆಗಳ ಗುಣಮಟ್ಟದ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಪದಾಧಿಕಾರಿ ಕಾನನಕಟ್ಟೆ ತಿಪ್ಪೇಸ್ವಾಮಿ ಮಾತನಾಡಿ, ಈಗಾಗಲೇ ಮುಂಗಾರು ಮಳೆ ವಿಳಂಬದಿಂದ ರೈತರು ಆತಂಕದಲ್ಲಿದ್ದಾರೆ. ಜಿಲ್ಲಾಡಳಿತ ಕೂಡಲೇ ಜನರು ಗುಳೆ ಹೋಗುವುದನ್ನು ತಡೆದು ಉದ್ಯೋಗ ಒದಗಿಸಬೇಕು. ರೈತರಿಗೆ ಭರವಸೆ ನೀಡಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿರಂಜೀವಿ ಮಾತನಾಡಿ, ರೈತರು ಒಗ್ಗಟ್ಟಾದರೆ ಸರ್ಕಾರವೇ ನಮ್ಮ ಮನೆಯ ಬಾಗಿಲಿಗೆ ಬರುತ್ತದೆ. ಜಗಳೂರು ತಾಲೂಕಿನಲ್ಲಿ ಕಳಪೆ ಬೀಜ, ರಸಗೊಬ್ಬರ, ಕೀಟನಾಶಕಗಳು ಮಾರಾಟ ಕಂಡುಬಂದರೆ ವರ್ತಕರ ವಿರುದ್ಧ ಹೋರಾಟ ಮಾಡಿ ಜೈಲಿಗೆ ಕಳುಹಿಸುವವರೆಗೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ದಿಬ್ಬದಹಳ್ಳಿ ಗಂಗಾಧರಪ್ಪ, ಚಿಕ್ಕಬನ್ನಿಹಟ್ಟಿ ವೀರೇಶ್, ಗ್ರಾಪಂ ಸದಸ್ಯರಾದ ಮಹೇಶ, ಪರಮೇಶ್, ಚಂದ್ರಶೇಖರ ಹಾಗೂ ಗ್ರಾಮಸ್ಥರಿದ್ದರು.