

ಮಳಖೇಡ: ಅತಿವೃಷ್ಟಿಯಿಂದ ಮುಂಗಾರು ಬೆಳೆ ಹಾನಿಯಾಗಿದ್ದು, ಸಮರ್ಪಕ ಸಮೀಕ್ಷೆ ನಡೆಸಿ ತಕ್ಷಣ ವರದಿ ಸಲ್ಲಿಸುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ ತಹಸೀಲ್ದಾರ್ ಹಾಗೂ ಸಹಾಯಕ ಕೃಷಿ ನಿರ್ದೇಶಕರಿಗೆ ಸೂಚನೆ ನೀಡಿದರು.
ಮಳಖೇಡದ ಕಾಗಿಣಾ ಸೇತುವೆ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸಂಗಾವಿ (ಎಂ) ಬ್ಯಾರೇಜ್, ಕೊಂಕನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ತಾಲೂಕು ಅಧಿಕಾರಿಗಳು ಎಲ್ಲೆಡೆ ಸಂಚರಿಸಿ, ಹಾನಿ ಪರಿಶೀಲಿಸಬೇಕು. ಮಳೆಯಿಂದ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿದ್ದು, ಮಕ್ಕಳ ಶಿಕ್ಷಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ತಾಕೀತು ಮಾಡಿದರು.
ಎಸಿ ಆಶಪ್ಪ ಪೂಜಾರಿ, ತಹಸೀಲ್ದಾರ್ ಶಿವರಾಜ ಶಿವಪುರ, ತಾಪಂ ಇಒ ಚನ್ನಪ್ಪ ರಾಯಣ್ಣನವರ್, ಬಿಇಒ ವಿಜಯಕುಮಾರ ಜಮಖಂಡಿ, ಸಹಾಯಕ ಕೃಷಿ ನಿರ್ದೇಶಕ ಹಂಪಣ್ಣ, ಕಂದಾಯ ನೀರಿಕ್ಷಕ ರವೀಂದ್ರನಾಥ ಇತರರಿದ್ದರು.