ಬೆಳೆ ಹಾನಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿ

CLK MLA BHETI
Published on

ಚಳ್ಳಕೆರೆ: ತಾಲೂಕಾದ್ಯಂತ ಗುರುವಾರ ರಾತ್ರಿ ಸುರಿದ ಮಳೆಯಿಂದ ಹಾನಿಯಾಗಿರುವ ಬೆಳೆ ಪರಿಸ್ಥಿತಿ ಕುರಿತು ಕೂಡಲೇ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ದೊಡ್ಡ ಉಳ್ಳಾರ್ತಿ, ಬೂದಿಹಳ್ಳಿ, ಬೋಗನಹಳ್ಳಿ, ಹೊನ್ನೂರು ಗ್ರಾಮಗಳ ಜಮೀನುಗಳಿಗೆ ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾತನಾಡಿದರು.

ಬೆಳೆ ಹಾನಿಯಾಗಿರುವ ಪ್ರದೇಶಕ್ಕೆ ಖುದ್ದು ಭೇಟಿ ಮಾಡಿ ಜಿಪಿಎಸ್ ಫೋಟೋ ಮತ್ತು ವೀಡಿಯೋ ವರದಿ ಕೂಡಲೇ ಜಿಲ್ಲಾ ಕಚೇರಿಗೆ ತಲುಪಿಸಬೇಕು. ಈ ಕುರಿತು ಸರ್ಕಾರದ ಗಮನಕ್ಕೆ ತಂದು ರೈತರಿಗೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಇದೇ ಸಮಯದಲ್ಲಿ ಬೋಗನಹಳ್ಳಿ ಗ್ರಾಮದಲ್ಲಿ 90 ಎಕರೆ ಪ್ರದೇಶದಲ್ಲಿ ಕರಬೂಜ ಬೆಳೆ ಕಳೆದುಕೊಂಡಿದ್ದ ರೈತರಾದ ಜಿ.ಕೆ.ವಿಜಯಕುಮಾರ್, ಮಧು, ಕೊಂಡರೆಡ್ಡಿ, ಪ್ರದೀಪ್, ನಿಂಗಣ್ಣ, ರಾಘವರೆಡ್ಡಿ, ಗುರಮ್ಮ, ಬೊಮ್ಮಕ್ಕ ಶಾಸಕರ ಬಳಿ ಅಳಲು ತೋಡಿಕೊಂಡರು.

1 ಎಕರೆಗೆ 50 ಸಾವಿರದಂತೆ ಖರ್ಚು ಮಾಡಿಕೊಂಡು ಕಳೆದ ಏಪ್ರಿಲ್ ತಿಂಗಳಲ್ಲಿ ನಾಟಿ ಮಾಡಿದ್ದೆವು. ಇನ್ನೇನು ಒಂದು ವಾರದಲ್ಲಿ ಫಸಲು ಕೈಗೆ ಸಿಗುವ ಹೊತ್ತಲ್ಲಿ ಮಳೆ, ಗಾಳಿ ಮತ್ತು ಆಲಿಕಲ್ಲಿನಿಂದ ಸಂಪೂರ್ಣ ನಷ್ಟವಾಗಿದೆ. 90 ಎಕರೆಯಲ್ಲಿ ಕರಬೂಜ ಬೆಳೆದಿದ್ದ ತಲಾ ರೈತರಿಗೆ 15 ಲಕ್ಷದಂತೆ ನಷ್ಟವಾಗಿದೆ. ಕೂಡಲೇ ಪರಿಹಾರ ಕೊಡಿಸಬೇಕು ಎಂದು ಮನವಿ ಮಾಡಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ವಕೀಲ ಜಿ.ಆರ್.ಅಶ್ವತ್ಥನಾಯಕ, ತಾಲೂಕು ಗೊಲ್ಲರ ಸಂಘದ ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ, ಗೋವಿಂದಪ್ಪ, ಉಳ್ಳಾರ್ತಿ ರಾಜಣ್ಣ, ತಿಮ್ಮಣ್ಣ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net