

ಕಲಘಟಗಿ: ಅತಿವೃಷ್ಟಿಯಿಂದಾಗಿ ಜಿಲ್ಲಾದ್ಯಂತ ಯಾವುದೇ ಭಾಗದಲ್ಲಿ ಬೆಳೆ ಹಾನಿ, ಮನೆ ಕುಸಿತದಿಂದ ಹಾನಿ ಉಂಟಾದಲ್ಲಿ ಅಂಥವರ ಸಹಾಯಕ್ಕೆ ಸ್ಥಳೀಯ ಆಡಳಿತದೊಂದಿಗೆ ಜಿಲ್ಲಾಡಳಿತವೂ ತಕ್ಷಣ ಧಾವಿಸಲಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ತಾಲೂಕಿನ ಗಂಜೀಗಟ್ಟಿ ಗ್ರಾಮದ ಹಿರೇಕೆರೆ ಉಕ್ಕಿ ಹರಿಯುತ್ತಿರುವ ನೀರಿನ ಸೆಳೆತಕ್ಕೆ ಬಾಲಕಿ ತೇಲಿ ಹೋಗಿರುವ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು.
ಬಾಲಕಿಯ ದೇಹದ ಶೋಧ ಕಾರ್ಯ ತೀವ್ರಗೊಂಡಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಜಿಲ್ಲಾ ತಂಡ ಹಾಗೂ ಅಗ್ನಿ ಶಾಮಕ ದಳದ ತಂಡ ಕೂಡ ಕಾರ್ಯೋನ್ಮುಖವಾಗಿವೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹದ ಭೀತಿ ಕಂಡು ಬರುತ್ತಿದ್ದು, ಕೆರೆ ಕಟ್ಟೆಗಳ ಸಮೀಪದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ನೆರೆಯಿಂದಾಗಿ ಕೆರೆಗಳು ಉಕ್ಕಿ ಹರಿಯುವ ವೇಳೆ ಮಕ್ಕಳು ಹಾಗೂ ವೃದ್ಧರ ಕುರಿತು ಹೆಚ್ಚಿನ ನಿಗಾ ವಹಿಸಬೇಕು. ಮಳೆಗಾಲದಲ್ಲಿ ಕೆರೆ ಹಾಗೂ ಬಾವಿಗಳಲ್ಲಿ ನೀರು ತುಂಬಿ ಸುಳಿಗಳು ತೀವ್ರಗೊಂಡಿರುತ್ತವೆ. ಈ ಸಮಯದಲ್ಲಿ ಯುವಕರು ಈಜಾಡಲು ಹೋಗಬಾರದು ಎಂದು ಸೂಚಿಸಿದರು.
ನಿರಂತರ ಮಳೆಯಿಂದಾಗಿ ಹಲವು ಜಮೀನುಗಳಲ್ಲಿ ನೀರು ನುಗ್ಗಿ ಬೆಳೆ ಹಾನಿ ಹಾಗೂ ಮನೆ ಕುಸಿತದ ಕುರಿತು ತಕ್ಷಣ ಸಮೀಕ್ಷೆ ನಡೆಸಿ ವರದಿ ಒಪ್ಪಿಸುವಂತೆ ಸ್ಥಳದಲ್ಲಿದ್ದ ತಹಸೀಲ್ದಾರ್ ಅಶೋಕ ಶಿಗ್ಗಾವಿ ಅವರಿಗೆ ಸೂಚಿಸಿದರು. ಯಾವುದೇ ಕಾರಣಕ್ಕೂ ಸಂತ್ರಸ್ತರಿಗೆ ಸಿಗಬೇಕಾದ ಪರಿಹಾರ ಧನ ವಿತರಣೆ ವಿಳಂಬವಾಗಬಾರದು ಎಂದು ಖಡಕ್ಕಾಗಿ ಸೂಚಿಸಿದರು. ಅತಿವೃಷ್ಟಿಯ ಸಮೀಕ್ಷೆಯಲ್ಲಿ ತಾಲೂಕು ಆಡಳಿತವು ಎಲ್ಲ ಇಲಾಖೆಗಳೊಂದಿಗೆ ಸಮನ್ವಯತೆಯ ಕೊರತೆಯಾಗದಂತೆ ಕಾರ್ಯ ಯೋಜನೆಗಳನ್ನು ರೂಪಿಸಿ ಸಾರ್ವಜನಿಕರ ಸಹಕಾರಕ್ಕೆ ಮುಂದಾಗಬೇಕೆಂದು ಜಿಲ್ಲಾಧಿಕಾರಿಗಳು ಆದೇಶಿಸಿದರು.
ಎನ್ಡಿಆರ್ಎಫ್ ತಂಡದ ಇನ್ಸ್ಪೆಕ್ಟರ್ ಆರ್. ಅಬೆನ್, ಬಿಜೆಪಿ ತಾಲೂಕು ಅಧ್ಯಕ್ಷ ಬಸವರಾಜ ಶೆರೇವಾಡ, ತಾ.ಪಂ. ನಾಮ ನಿರ್ದೇಶಿತ ಸದಸ್ಯ ಬಸವರಾಜ ಅಳ್ಳಿಗೇರಿ, ಜಗದೀಶ ಗಾಣಿಗೇರ, ರೈತ ಪ್ರಮುಖರು ಉಪಸ್ಥಿತರಿದ್ದರು.
ಬಾಲಕಿಗಾಗಿ ಮುಂದುವರಿದ ಶೋಧ
ಗಂಜೀಗಟ್ಟಿ ಗ್ರಾಮದ ಹಿರೇಕೆರೆಯು ಉಕ್ಕಿ ಹರಿಯುತ್ತಿದೆ. ರಸ್ತೆ ಮೇಲೆ ರಭಸದಿಂದ ಹರಿಯುತ್ತಿರುವ ನೀರಿನ ಸೆಳೆತಕ್ಕೆ ತೇಲಿ ಹೋಗಿರುವ 9 ವರ್ಷದ ಬಾಲಕಿಯ ಶೋಧ ಕಾರ್ಯವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಜಿಲ್ಲಾ ತಂಡ ಶುಕ್ರವಾರ ಬೆಳಗಿನಿಂದ ಆರಂಭಿಸಿದೆ. ತಾಲೂಕಿನ ಗಂಜೀಗಟ್ಟಿ ಗ್ರಾಮದ ಶ್ರೀದೇವಿ ಹನುಮಂತಪ್ಪ ಗಾಣಿಗೇರ ಗುರುವಾರ ತಾಯಿಯೊಂದಿಗೆ ಹೋಗುತ್ತಿದ್ದ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಸ್ಥಳೀಯ ಯುವಕರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಬಾಲಕಿಗಾಗಿ ಹುಡುಕಾಟ ನಡೆಸಿದರು. ಆದರೆ, ಬಾಲಕಿ ಪತ್ತೆಯಾಗದ್ದರಿಂದ ಜಿಲ್ಲಾಧಿಕಾರಿಗಳ ನಿರ್ದೇಶನದನ್ವಯ ತಹಸೀಲ್ದಾರ್ ಅಶೋಕ ಶಿಗ್ಗಾಂವಿ, ಇನ್ಸ್ಪೆಕ್ಟರ್ ಆರ್. ಅಬೆನ್ ನೇತೃತ್ವದ ಎನ್.ಡಿ.ಆರ್.ಎಫ್. ತಂಡ ಶುಕ್ರವಾರ ಬೆಳಗಿನಿಂದಲೇ ಬಾಲಕಿಯ ಹುಡುಕಾಟಕ್ಕೆ ಶ್ರಮಿಸುತ್ತಿದೆ. ಅವರೊಂದಿಗೆ ಅಗ್ನಿ ಶಾಮಕ ದಳದ ಇನ್ನೊಂದು ತಂಡವೂ ಶೋಧ ಕಾರ್ಯದಲ್ಲಿ ತೊಡಗಿದೆ. ನೀರು ಹರಿಯುತ್ತಿರುವ ದಿಕ್ಕಿನಲ್ಲಿ ಗಂಜೀಗಟ್ಟಿ ಹದ್ದಿನಿಂದ ಬಗಡಗೇರಿ ಹಿರೇಕೆರೆ, ಚಿಕ್ಕಹಳ್ಳ ಹಾಗೂ ಭೋಗೇನಾಗರಕೊಪ್ಪ ಹದ್ದಿನೆಲ್ಲೆಡೆ ಶೋಧ ಕಾರ್ಯ ನಡೆದಿದೆ.