

ಚಿತ್ರದುರ್ಗ: ಈಚೆಗೆ ಸುರಿದ ಅಧಿಕ ಮಳೆಯಿಂದ ಈರುಳ್ಳಿ ಸೇರಿದಂತೆ ನಾನಾ ಬೆಳೆಗಳು ನಷ್ಟವಾಗಿದ್ದು, ಕೂಡಲೇ ಬೆಳೆ ಹಾನಿ ಪರಿಹಾರ ವಿತರಿಸ ಬೇಕೆಂದು ಆಗ್ರಹಿಸಿ ರೈತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಬೆಳೆವಿಮೆಗೆ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆ ಡಿಡಿ, ಎಡಿಸಿ ಮತ್ತಿತರ ಅಧಿಕಾರಿಗಳು ಸಭೆ ನಡೆಸುತ್ತಿದ್ದಾರೆ ಎಂದರಿತ ಪ್ರತಿಭಟನಾನಿರತರು, ಡಿಸಿ ಕಚೇರಿ ಸಭಾಂಗಣಕ್ಕೆ ನುಗ್ಗಲು ಯತ್ನಿಸಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತರ ಮಧ್ಯೆ ಭಿನ್ನಮತ ಸೃಷ್ಟಿಸಬೇಡಿ ಎಂದು ಕಿಡಿಕಾರಿದರು.
ಮಧ್ಯಪ್ರವೇಶಿಸಿದ ಎಡಿಸಿ ಬಿ.ಟಿ.ಕುಮಾರಸ್ವಾಮಿ, ಸದ್ಯದಲ್ಲೇ ಜಿಲ್ಲಾಧಿಕಾರಿ ನೇತೃತ್ವದಲ್ಲೇ ಕರೆಯುವ ಸಭೆಗೆ ಎಲ್ಲ ರೈತ ಬಣಗಳ ಪ್ರಮುಖರನ್ನು, ವಿಮಾ ಕಂಪನಿ ಅಧಿಕಾರಿಗಳನ್ನು ಕರೆಯುವಂತೆ ತೋಟಗಾರಿಕೆ ಇಲಾಖೆ ಡಿಡಿ ಶರಣಬಸಪ್ಪ ಬೋಗಿ ಅವರಿಗೆ ಸೂಚಿಸಿದರು.
ಕೊಳೆರೋಗಕ್ಕೆ ತುತ್ತಾಗಿ ನಷ್ಟವಾಗಿರುವ ಈರುಳ್ಳಿ ಬೆಳೆ ಹಾನಿ ಸಮೀಕ್ಷೆ ನಡೆಸಿ, ಎಕರೆಗೆ 50 ಸಾವಿರ ರೂ. ಪರಿಹಾರ ಕೊಡಬೇಕು. ನಷ್ಟ ವಾಗಿರುವ ಎಲ್ಲ ಬೆಳೆಗಳ ಸಮೀಕ್ಷೆ ನಡೆಸಬೇಕು. ಚಳ್ಳಕೆರೆ, ಮೊಳಕಾಲ್ಮೂರು, ಹಿರಿಯೂರು ತಾಲೂಕಲ್ಲಿ ಹೆಚ್ಚಾಗಿ ಶೇಂಗಾ ಬೆಳೆಯಲಾಗುತ್ತಿದ್ದು, ಸಕಾಲಕ್ಕೆ ಮಳೆಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ವಿಮಾ ಕಂತು ಪಾವತಿಸಿದ ರೈತರಿಗೆ ಪರಿಹಾರ ಬಿಡುಗಡೆ ಮಾಡಬೇಕು. ಕೃಷಿ ಸಾಲ ಮನ್ನಾ ಮಾಡಿ ಹೊಸ ಸಾಲ ವಿತರಿಸುವುದು ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಪ್ರೊ.ಜೆ.ಯಾದವರೆಡ್ಡಿ, ಕೆ.ಪಿ.ಭೂತಯ್ಯ, ಹಂಪಯ್ಯನಮಾಳಿಗೆ ಧನಂಜಯ, ಎಸ್.ಕೆ.ಕುಮಾರಸ್ವಾಮಿ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಬಸ್ತಿಹಳ್ಳಿ ಜಿ.ಸುರೇಶ್‌ಬಾಬು, ಕೆ.ಸಿ.ಹೊರಕೇರಪ್ಪ, ಬಿ.ಒ.ಶಿವಕುಮಾರ್, ಎಸ್. ಮಂಜುನಾಥ್, ಎಂ.ಬಿ.ತಿಪ್ಪೇಸ್ವಾಮಿ, ಆರ್.ಚೇತನ ಮತ್ತಿತರರು ಇದ್ದರು.