

ಚಿಕ್ಕಬಳ್ಳಾಪುರ: ಅಕ್ಟೋಬರ್, ನವೆಂಬರ್‌ನಲ್ಲಿ ಸುರಿದ ಮಳೆಯಿಂದಾಗಿ ಹಾನಿಗೀಡಾಗಿರುವ ಜಿಲ್ಲೆಯ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿದ ಕೇಂದ್ರ ವಿಪತ್ತು ಪರಿಶೀಲನಾ ತಂಡ, ರೈತರಿಂದಲೇ ಖುದ್ದು ಮಾಹಿತಿ ಸಂಗ್ರಹಿಸಿತು. ಇದಕ್ಕೆ ಪೂರಕವಾಗಿ ಜಿಲ್ಲಾಡಳಿತ ಸಹ ಪ್ರಾತ್ಯಕ್ಷಿತೆ ಮೂಲಕ ವಾಸ್ತವ ಮನವರಿಕೆ ಮಾಡಿಕೊಟ್ಟಿತು.
ತಂಡದ ಪ್ರವಾಸಕ್ಕೂ ಮುನ್ನ ಜಿಲ್ಲಾಡಳಿತ ಭವನದಲ್ಲಿನ ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಬೆಳೆಹಾನಿ, ಮನೆ, ಕೆರೆ, ರಸ್ತೆ ಮತ್ತು ಕಾಲುವೆಗಳ ಹಾನಿ ಬಗ್ಗೆ ವಿವರಿಸಿದರು. ಇಲಾಖೆ ಅಧಿಕಾರಿಗಳ ತಂಡದೊಂದಿಗೆ ಹಾನಿ ಸ್ಥಳಕ್ಕೆ ಭೇಟಿ ನೀಡಿ, ನಷ್ಟಕ್ಕೊಳಗಾಗಿರುವ ಫಲಾನುಭವಿಗಳಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಹಾನಿಯಾದ ಕಟ್ಟಡಗಳ ದುರಸ್ತಿಗೆ ಅಂದಾಜು ಅನುದಾನದ ಬಗ್ಗೆಯೂ ವರದಿ ತಯಾರಿಸಲಾಗಿದೆ ಎಂದು ಕೇಂದ್ರ ತಂಡದ ಗಮನ ಸೆಳೆದರು.
ಸಭೆ ಬಳಿಕ ಚಿಕ್ಕಬಳ್ಳಾಪುರದ ಅಜ್ಜವಾರದಲ್ಲಿ ಸತ್ಯನಾರಾಯಣಪ್ಪ ಮತ್ತು ಪ್ರಸನ್ನಕುಮಾರ್ ಹೊಲದಲ್ಲಿ ರಾಗಿ ವೀಕ್ಷಿಸಿದ ತಂಡ ಅಮಾನಿ ಗೋಪಾಲಕೃಷ್ಣ ಕೆರೆಯ ನೀರು ತೋಟಗಳಿಗೆ ಈಗಲೂ ಹರಿಯುತ್ತಿರುವ, ಬೆಳೆ ಜಲಾವೃತಗೊಂಡಿರುವುದರ ಬಗೆಗಿನ ಕಾರಣ ಕೇಳಿತು. ಧಾರಾಕಾರ ಮಳೆಗೆ ರಾಜಕಾಲುವೆಗಳು ತುಂಬಿ ಹರಿದಿವೆ. ಹೂಳು, ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿದ ಸ್ಥಳೀಯರು, ಹಾಳಾದ ರಾಗಿ, ಮುಸುಕಿನಜೋಳ, ತರಕಾರಿ ಪ್ರದರ್ಶಿಸುವ ಮೂಲಕ ಗಮನ ಸೆಳೆದರು.
ನಂತರ ಶಿಡ್ಲಘಟ್ಟ ನಗರದಲ್ಲಿ ಕುಸಿದು ಬಿದ್ದ ಮನೆಗಳು, ಹಾನಿಗೀಡಾದ ಕಟ್ಟಡಗಳು, ಚಿಕ್ಕಬಂದರಘಟ್ಟ ಮತ್ತು ದೊಡ್ಡ ಬಂದರಘಟ್ಟ ರಸ್ತೆ ಮತ್ತು ಸೇತುವೆ ಹಾನಿ ವೀಕ್ಷಿಸಿತು. ಶಿಡ್ಲಘಟ್ಟ ತಾಲೂಕಿನ ಪಿಲ್ಲಗುಂಡ್ಲಹಳ್ಳಿಯಲ್ಲಿ ರೈತ ತಿಮ್ಮರಾಜು ಸೌತೆಕಾಯಿ, ನರಸಿಂಹರೆಡ್ಡಿಯ ಗೆಡ್ಡೆಕೋಸು ಬೆಳೆ ನಷ್ಟದ ಅಳಲು ತೋಡಿಕೊಂಡರು.
ರಾಜ್ಯ ವಿಪತ್ತು ನಿರ್ವಹಣೆಯ ಆಯುಕ್ತ ಮನೋಜ್‌ರಾಜನ್, ಕೃಷಿ ಅಪರ ನಿರ್ದೇಶಕ ಬಿ.ಬಸವರಾಜು, ತೋಟಗಾರಿಕೆ ಇಲಾಖೆ ಅಪರ ನಿರ್ದೇಶಕ ಬಿ.ಕೆ.ದುಂಡಿ, ಜಿಪಂ ಸಿಇಒ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಉಪ ವಿಭಾಗಾಧಿಕಾರಿ ಎ.ಎನ್.ರಘು ನಂದನ್ ಮತ್ತಿತರರು ಇದ್ದರು.
ದಾಖಲೆಯ ಮಳೆ ಪ್ರಮಾಣ: ಜಿಲ್ಲೆಯಲ್ಲಿ ವಾರ್ಷಿಕ 731.2 ಮಿ.ಮೀ ವಾಡಿಕೆ ಮಳೆಗೆ 1,269 ಮಿ.ಮೀ ಮಳೆಯಾಗಿದೆ. ಅದರಲ್ಲೂ ಅಕ್ಟೋಬರ್‌ನಲ್ಲಿ 145 ಮಿ.ಮೀ ವಾಡಿಕೆ ಮಳೆಗೆ 314.2 ಮಿ.ಮೀ, ನವೆಂಬರ್‌ನಲ್ಲಿ 53.2 ಮಿ.ಮೀ ಮಳೆ ಪೈಕಿ 247.4 ಮಿ.ಮೀ ಮಳೆಯಾಗಿದೆ. ಈ ಎರಡು ತಿಂಗಳ ಅವಧಿಯಲ್ಲಿ ಧಾರಾಕಾರ ಮಳೆಗೆ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟ ಉಂಟಾಗಿದೆ.
1,953 ಮನೆಗಳಿಗೆ ಹಾನಿ: ಜಿಲ್ಲೆಯಲ್ಲಿ 99 ಮನೆಗಳು (ಶೇ.75 ರಿಂದ ಶೇ.100 ಹಾನಿ), 999 ಮನೆಗಳು (ಶೇ.25 ರಿಂದ ಶೇ.75 ಹಾನಿ), 855 ಮನೆಗಳು (ಶೇ.15 ರಿಂದ ಶೇ.25 ಹಾನಿ) ಸೇರಿ 1,953 ಮನೆಗಳು ಹಾನಿಯಾಗಿವೆ. ಜತೆಗೆ ರಸ್ತೆ, ಸೇತುವೆ, ಶಾಲಾ ಕಟ್ಟಡ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ವಿದ್ಯುತ್ ಕಂಬಗಳು ಹಾನಿಗೊಂಡು ಕೋಟ್ಯಂತರ ರೂ. ನಷ್ಟ ಉಂಟಾಗಿರುವುದಾಗಿ ಕೇಂದ್ರ ತಂಡಕ್ಕೆ ಜಿಲ್ಲಾಡಳಿತ ವರದಿ ನೀಡಿದೆ.
63,928 ಹೆ.ಪ್ರ. ಬೆಳೆ ನಾಶ: ಜಿಲ್ಲೆಯಲ್ಲಿ ಎರಡು ತಿಂಗಳಲ್ಲಿ ಸುರಿದ ಮಳೆಗೆ 63,928.35 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದ್ದು 391 ಕೋಟಿ ರೂ.ನಷ್ಟ ಉಂಟಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಧಿ ಅನುಸಾರ 48.72 ಕೋಟಿ ರೂ. 58,207 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ನಾಶದಿಂದ 271.89 ಕೋಟಿ ರೂ, 5,643 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕಾ ಬೆಳೆ ನಾಶದಿಂದ 118.39 ಕೋಟಿ ರೂ, 78.34 ಹೆಕ್ಟೇರ್ ಪ್ರದೇಶದಲ್ಲಿನ ರೇಷ್ಮೆಬೆಳೆ ನಾಶದಿಂದ 78 ಲಕ್ಷ ರೂ. ನಷ್ಟ ಉಂಟಾಗಿದೆ. ದನಕರು, ಕುರಿ, ಮೇಕೆ ಸೇರಿದಂತೆ 53 ಜಾನುವಾರುಗಳು ಬಲಿಯಾಗಿವೆ.
ತಂಡದಲ್ಲಿ ಯಾರ‌್ಯಾರಿದ್ದರು?: ಕೇಂದ್ರ ವಿಪತ್ತು ಅಧ್ಯಯನ ತಂಡದ ಮುಖ್ಯಸ್ಥ ಸುಶೀಲ್ ಪಾಲ್ (ಮುಖ್ಯ ನಿಯಂತ್ರಕರು, ಲೆಕ್ಕಪತ್ರ, ಭಾರತ ಸರ್ಕಾರ) ಮತ್ತು ಕೇಂದ್ರ ವಿಪತ್ತು ಅಧ್ಯಯನ ತಂಡದ ಸದಸ್ಯ ಸುಭಾಷ್‌ಚಂದ್ರ (ನಿರ್ದೇಶಕ, ಕೃಷಿ ಇಲಾಖೆ, ಭಾರತ ಸರ್ಕಾರ) ಇದ್ದರು.