

ಕೊಪ್ಪಳ: 2023-24ನೇ ಕೃಷಿ ಪ್ರಶಸ್ತಿಯಡಿ ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ನೋಂದಾಯಿಸುವಂತೆ ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್ ತಿಳಿಸಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸಲು ರೈತರಲ್ಲಿ ಆರೋಗ್ಯಕರ, ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಸ್ಪರ್ಧಾತ್ಮಕ ಇಳುವರಿ ಆಧಾರದ ಮೇಲೆ, ಕೃಷಿ ಪ್ರಶಸ್ತಿ ಬಹುಮಾನ ನೀಡಲಾಗುತ್ತಿದ್ದು, ಕೃಷಿ ಪ್ರಶಸ್ತಿಯಡಿ ಬೆಳೆ ಸ್ಪರ್ಧೆಗೆ ಜಿಲ್ಲೆಯ ಆಸಕ್ತ ರೈತರು ಅರ್ಜಿ ಸಲ್ಲಿಸಬಹುದು. ರಾಜ್ಯ ಮಟ್ಟದಲ್ಲಿ ಸ್ಫರ್ಧೆಗಾಗಿ ಜಿಲ್ಲೆಯ ನೀರಾವರಿ ಮತ್ತು ಮಳೆಯಾಶ್ರಿತ ಮುಂಗಾರು ಭತ್ತ ಹಾಗೂ ಮಳೆಯಾಶ್ರಿತ ಶೇಂಗಾ, ನವಣೆ, ಸಜ್ಜೆ, ಪೂರ್ಣಬೆಳೆಯ ತೊಗರಿ, ಸೂರ್ಯಕಾಂತಿ ಮತ್ತು ಮುಸುಕಿನ ಜೋಳ ಬೆಳೆಗಳಿಗೆ ರೈತರು ಸ್ಪರ್ಧಿಸಬಹುದು.
ಕೃಷಿಯಲ್ಲಿ ರೈತ ಮಹಿಳೆಯರನ್ನು ಪ್ರೋತ್ಸಾಹಿಸುವ ಹಾಗೂ ಇತರೆ ಮಹಿಳೆಯರನ್ನು ಕೃಷಿಯತ್ತ ಆಕರ್ಷಿಸಲು ರೈತ ಮಹಿಳೆಯರಿಂದ ಪ್ರತ್ಯೇಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆ.31ಕೊನೆಯ ದಿನ. ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದ ರೈತರಿಗೆ 100 ರೂ. ಹಾಗೂ ಪಜಾ, ಪಪಂ ರೈತರಿಗೆ 25ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಲು ಮನವಿ ಮಾಡಿದ್ದಾರೆ.