

ಚಿತ್ರದುರ್ಗ: ಸುಸ್ತಿಯಾಗಿರುವ ಬೆಳೆ ಸಾಲ ವಸೂಲಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿಗಳು ಅಗತ್ಯ ಕ್ರಮವಹಿಸ ಬೇಕೆಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ, ಸಚಿವ ಡಿ. ಸುಧಾಕರ್ ಹೇಳಿದರು.
ಸೋಮವಾರ ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿ, ಶೂನ್ಯ ಬಡ್ಡಿ ದರದಲ್ಲಿ ಕಳೆದ ವರ್ಷದ ಗುರಿ 512 ಕೋಟಿ ರೂ.ಪೈಕಿ 510 ಕೋಟಿ ರೂ.ಬೆಳೆ ಸಾಲ ವಿತರಿಸಲಾಗಿದೆ. ಈ ಮೊತ್ತದಲ್ಲಿ ಸಾಲದ ಪಡೆದವರ ಪೈಕಿ 4327 ರೈತರು ಸಾಲ ಮರು ಪಾವತಿಸದೆ 32 ಕೋಟಿ ರೂ. ಸುಸ್ತಿಯಾಗಿದೆ ಎಂದರು.
ರೈತರ ಮನವೊಲಿಸಿ ಸಾಲ ಕಟ್ಟಿಸಿಕೊಂಡು ಮತ್ತೆ ಹೊಸದಾಗಿ ಅವರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಬೇಕು. ಆ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಬೇಕು. ಈ ನಿಟ್ಟಿನಲ್ಲಿ ಪ್ಯಾಕ್ಸ್ ಆಡಳಿತ ಮಂಡಳಿಯವರು ಹಾಗೂ ಅಧಿಕಾರಿ, ಸಿಬ್ಬಂದಿ ಶ್ರಮಿಸಬೇಕೆಂದು ಸುಧಾಕರ್ ಹೇಳಿದರು.
ಪ್ರಸಕ್ತ ಹಣಕಾಸು ವರ್ಷದಲ್ಲಿ ಬೆಳೆ ಸಾಲ ವಿತರಣೆ ಗುರಿಯನ್ನು 550 ಕೋಟಿ ರೂ.ಗೆ ಹಾಗೂ ಅಭಿವೃದ್ಧಿ ಸಾಲವನ್ನು 55 ಕೋಟಿ ರೂ.ಗಳಿಂದ 65 ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದು ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್‌ಉಲ್ಲಾ ಷರೀಫ್ ಸಭೆಗೆ ಮಾಹಿತಿ ನೀಡಿದರು.
ಚಳ್ಳಕೆರೆ ಶಾಸಕ, ಬ್ಯಾಂಕ್ ನಿರ್ದೇಶಕ ಟಿ. ರಘುಮೂರ್ತಿ, ಉಪಾಧ್ಯಕ್ಷ ಎಚ್.ಬಿ. ಮಂಜುನಾಥ್, ಮಾಧುರಿ ಗಿರೀಶ್, ನಿಶಾನಿ ಜಯಣ್ಣ, ಪಿ. ವಿನೋದಾಸ್ವಾಮಿ, ಕೆ. ಜಗಣ್ಣ, ಕೋಗುಂಡೆ ದ್ಯಾಮಣ್ಣ, ರಘುರಾಮರೆಡ್ಡಿ, ಪಿ. ತಿಪ್ಪೇಸ್ವಾಮಿ, ಟಿ. ಮಹಾಂತೇಶ್, ಡಾ.ಕೆ. ಅನಂತ್, ಒ. ಮಂಜುನಾಥ್, ವೃತ್ತಿಪರ ನಿರ್ದೇಶಕರಾದ ಆರ್.ಎಸ್. ದಿಲೀಪ್‌ಕುಮಾರ್, ಎ. ಸುಮಂತ್, ಸಿ.ಇ. ಮಹೇಶ್ವರಪ್ಪ ಇತರರಿದ್ದರು.