ಬೆಳೆ ಸರ್ವೇಯಲ್ಲಿ ಅರ್ಹರರನ್ನು ಬಿಟ್ಟು ಅನರ್ಹರ ಸೇರ್ಪಡೆ

12CBP6
Published on

ಚಿಕ್ಕಬಳ್ಳಾಪುರ : ತಾಲೂಕಿನಲ್ಲಿ ತೋಟಗಾರಿಕಾ ಇಲಾಖೆ ಕೈಗೊಂಡಿರುವ ಬೆಳೆ ಸರ್ವೇ ಬಗ್ಗೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.

ರೈತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಡೆಸಿರುವ ಬೆಳೆ ಸರ್ವೇ ಸಮರ್ಪಕವಾಗಿಲ್ಲ. ಅನರ್ಹರು ಸೇರ್ಪಡೆಯಾಗಿ, ಅನೇಕ ಅರ್ಹರನ್ನು ಕೈ ಬಿಡಲಾಗಿದೆ. ಯಾವ ಆಧಾರದ ಮೇಲೆ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದು ಹಿರಿಯ ಸದಸ್ಯ ಎನ್.ಸುಬ್ಬರಾಯಪ್ಪ ಪ್ರಶ್ನಿಸಿದರು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಹೂವು, ತರಕಾರಿಗೆ ಮಾರುಕಟ್ಟೆಯಿಲ್ಲದೇ ರೈತರು ಕೋಟ್ಯಂತರ ರೂ. ನಷ್ಟ ಅನುಭವಿಸಿದ್ದಾರೆ. ಕೆಲವೆಡೆ ಉಚಿತವಾಗಿ ವಿತರಿಸಿದ್ದರೆ, ಹಲವು ಕಡೆ ತಿಪ್ಪೆಗೆ ಬಿಸಾಡಲಾಗಿದೆ. ಸರ್ಕಾರ ಘೋಷಿಸಿರುವ ಪರಿಹಾರವು ಪಾರದರ್ಶಕವಾಗಿ ನಷ್ಟಕ್ಕೊಳಗಾದ ರೈತರಿಗೆ ಸೇರಬೇಕು ಎಂದು ಒತ್ತಾಯಿಸಿದರು.ಪ್ರತಿಕ್ರಿಯಿಸಿದ ಅಧ್ಯಕ್ಷರು, ಸರ್ವೇಯಲ್ಲಿ ಕೈ ಬಿಡಲಾಗಿರುವ ಅರ್ಹ ರೈತರಿಗೆ ಅನ್ಯಾಯವಾಗದಂತೆ ವರದಿಯನ್ನು ಮರು ಪರಿಶೀಲಿಸಿ, ಲೋಪಗಳು ಇಲ್ಲದಿರುವುದನ್ನು ದೃಢಪಡಿಸಿಕೊಳ್ಳುವಂತೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮುಂಗಾರು ಅವಧಿಯಲ್ಲಿ ಕೃಷಿ ಚಟುವಟಿಕೆ ಬಿರುಸುಗೊಳ್ಳುತ್ತಿದ್ದು ಸಮರ್ಪಕವಾಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಿಸಬೇಕು. ಕಳಪೆ ಇಲ್ಲವೇ ಅನಧಿಕೃತ ಬೆಲೆಗೆ ಮಾರಾಟಕ್ಕೆ ಅವಕಾಶ ನೀಡಬಾರದು. ಒಂದು ವೇಳೆ ರೈತರಿಂದ ದೂರು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.ಕುಡಿಯುವ ನೀರು, ವಿದ್ಯುತ್ ಸಮಸ್ಯೆ, ವಸತಿ ಯೋಜನೆ, ರಾಸುಗಳಿಗೆ ಲಸಿಕೆ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಉಪಾಧ್ಯಕ್ಷೆ ಇಂದಿರಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ತಿರುಮಳಪ್ಪ, ಇಒ ಎಸ್.ಎಲ್.ಹರ್ಷವರ್ಧನ್ ಮತ್ತಿತರರು ಇದ್ದರು.

ಮಾಸ್ಕ್ ಉಚಿತ ವಿತರಣೆ : ಜೂ.25ರಿಂದ ನಡೆಯುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 1,449 ಬಾಲಕರು ಮತ್ತು 1,356 ಬಾಲಕಿಯರು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದಕ್ಕಾಗಿ 15 ಪರೀಕ್ಷಾ ಕೇಂದ್ರಗಳನ್ನು ಗುರುತಿಸಿದ್ದು ಸುರಕ್ಷತೆಯಿಂದ ಪರೀಕ್ಷೆ ನಡೆಸಲಾಗುತ್ತದೆ. ಈಗಾಗಲೇ ಮಾಸ್ಕ್, ಸ್ಯಾನಿಟೈಸರ್ ಸೌಲಭ್ಯ ಒದಗಿಸುವಿಕೆ ಮತ್ತು ಸಿಬ್ಬಂದಿ ನಿಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಶಾಂತಲಾ ಸಭೆಗೆ ವಿವರಿಸಿದರು. ಮಾಸ್ಕ್‌ಗೆ ವಿದ್ಯಾರ್ಥಿಗಳಿಂದ ತಲಾ 200 ರೂ. ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂದಾಗ, ನಿಯಮಾನುಸಾರ ಉಚಿತವಾಗಿ ಒದಗಿಸಲಾಗುತ್ತದೆ ಎಂದು ಬಿಇಒ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net