ಬೆಳೆ ಸಮೀಕ್ಷೆಗೆ ಪ್ರತಿನಿಧಿಗಳಿಗೆ ಸಹಕರಿಸಿ

02.09.2020 SDLP 01
Published on

ಶಿಡ್ಲಘಟ್ಟ : ಮೊಬೈಲ್ ಲಭ್ಯತೆಯ ಕೊರತೆ ಸೇರಿ ನಾನಾ ಕಾರಣಗಳಿಂದಾಗಿ ಬೆಳೆ ಸಮೀಕ್ಷೆ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳೆ ಸಮೀಕ್ಷೆ ಕಾರ್ಯ ಚುರುಕುಗೊಳಿಸಲು ಸ್ಥಳೀಯ ಪ್ರತಿನಿಧಿಗಳನ್ನು ನೇಮಿಸಲಾಗಿದೆ. ಇವರ ಸಹಾಯ ಪಡೆದು ಬೆಳೆಗಳ ಮಾಹಿತಿ ದಾಖಲಿಸುವಂತೆ ತಹಸೀಲ್ದಾರ್ ಕೆ. ಅರುಂಧತಿ ರೈತರಲ್ಲಿ ಮನವಿ ಮಾಡಿದರು.

ತಾಲೂ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ರೈತ ಮುಖಂಡರು, ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಕಂದಾಯ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ,ಸಮೀಕ್ಷೆ ಕಾರ್ಯ ಆ.24ಕ್ಕೆ ಕೊನೆಗೊಳ್ಳಬೇಕಿತ್ತು. ಆದರೆ, ಸಮೀಕ್ಷೆ ಅಪೂರ್ಣವಾಗಿರುವುದರಿಂದ ಈ ಅವಧಿಯನ್ನು ಒಂದು ತಿಂಗಳು ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ರೈತರು ಈ ಅವಕಾಶ ಬಳಸಿಕೊಳ್ಳಬೇಕು ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಮಾತನಾಡಿ, ತೋಟಗಾರಿಕೆ ಬೆಳೆಗಾರರು ಮತ್ತು ರೈತರು ಕೃಷಿ ಅಥವಾ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಗ್ರಾಮದ ಸ್ಥಳೀಯ ಪ್ರತಿನಿಧಿ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಅವರ ಸಹಾಯದಿಂದ ಬೆಳೆ ಸಮೀಕ್ಷೆ ಮಾಡಿಸಬೇಕು ಎಂದು ಹೇಳಿದರು.

ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ರಾಮಕೃಷ್ಣಪ್ಪ ಮಾತನಾಡಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಪಡೆಯಲು ಸರ್ವೇ ನಂಬರ್ ಮತ್ತು ಸಬ್ ಸರ್ವೇ ನಂಬರ್‌ಗಳು ಅಗತ್ಯವಾಗಿರುತ್ತವೆ. ಆದ್ದರಿಂದ, ಈ ಬಗ್ಗೆ ನಿಖರವಾದ ಮಾಹಿತಿ ನೀಡಿ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಶ್ರೀನಿವಾಸ್, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಎಸ್.ಎಂ. ನಾರಾಯಣ ಸ್ವಾಮಿ, ರೈತ ಸಂಘ (ಪುಟ್ಟಣ್ಣಯ್ಯ ಬಣ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಸ್. ವೆಂಕಟಸ್ವಾಮಿ, ತಾಲೂಕು ಅಧ್ಯಕ್ಷ ಎಸ್.ಎಂ. ರವಿಪ್ರಕಾಶ್, ರೈತ ಮುಖಂಡರಾದ ಚನ್ನೇಗೌಡ, ರವಿಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net