ಬೆಳೆ ಸಮೀಕ್ಷೆ ರೈತರಿಗೆ ಅನ್ಯಾಯ ಸಹಿಸಲ್ಲ

0910Klb10
Published on

ಕಲಬುರಗಿ: ಕಲಬುರಗಿ ಗ್ರಾಮೀಣ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಕಮಲಾಪುರ, ಕಲಬುರಗಿ, ಶಹಾಬಾದ್, ಆಳಂದ ತಾಲೂಕಿನ ಗ್ರಾಮಗಳಲ್ಲಿ ಮಳೆಯಿಂದ ಹಾನಿಗೀಡಾದ ಬೆಳೆಯ ಕುರಿತು ಅತ್ಯಂತ ಕಡಿಮೆ ಹಾನಿಯಾಗಿದೆ ಎಂದು ವರದಿ ನೀಡಿದ್ದು ಸರಿಯಲ್ಲ, ಕೂಡಲೇ ಪುನಃ ಸಮರ್ಪಕ ಸಮೀಕ್ಷೆ ನಡೆಸಿ, ವರದಿ ನೀಡಬೇಕು ಎಂದು ಶಾಸಕ ಬಸವರಾಜ ಮತ್ತಿಮಡು ಸೂಚಿಸಿದರು.
ನಗರದಲ್ಲಿ ಉಭಯ ತಾಲೂಕುಗಳ ತಹಸೀಲ್ದಾರ್, ಕೃಷಿ ಇಲಾಖೆ ಅಧಿಕಾರಿಗಳ ಸಭೆಯನ್ನು ಬುಧವಾರ ನಡೆಸಿದ ಅವರು, ಗ್ರಾಮೀಣ ಕ್ಷೇತ್ರದಲ್ಲಿ ಕೇವಲ ಐದಾರು ನೂರು ಎಕರೆ ಬೆಳೆ ಹಾನಿ ತೋರಿಸಿದ್ದು, ಸಂಪೂರ್ಣ ತಪ್ಪಾಗಿದೆ. ಬೆಳೆ ಹಾನಿ ಪರಿಹಾರ ಪಟ್ಟಿಯನ್ನು ರೈತರ ಗಮನಕ್ಕೆ ತರದೇ ಸಿದ್ಧಪಡಿಸಿದರೆ ಹೇಗೆ ಎಂದು ಪ್ರಶ್ನಿಸಿದರು.
ಸೇಡಂ ಮತ್ತು ಆಳಂದ ಕ್ಷೇತ್ರದಲ್ಲಿ ಹೆಚ್ಚಿನ ರೈತರಿಗೆ ಪರಿಹಾರ ನೀಡಿರುವ ವರದಿಗಳಿವೆ. ಆದರೆ ನಮ್ಮ ಕ್ಷೇತ್ರದ ರೈತರಿಗೆ ಅನ್ಯಾಯವಾಗುತ್ತಿದೆ. ಕಮಲಾಪುರ ತಾಲೂಕಿನ ವರನಾಳದಲ್ಲಿ ರೈತರು ತಕರಾರು ಅರ್ಜಿ ಸಲ್ಲಿಸಿದರೂ ಸಮೀಕ್ಷೆ ಯಾಕೆ ಮಾಡಿಲ್ಲ? ಕೂಡಲೇ ಪುನಃ ಸಮೀಕ್ಷೆ ನಡೆಸಬೇಕು ಎಂದರು. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಬೆಳೆ ವಿಮೆ ದೊರೆಯುವಂತೆ ಜಾಗೃತಿ, ಸಾಥ್ ನೀಡಬೇಕು ಎಂದರು.
ಪ್ರಸ್ತುತ ಗ್ರಾಮ ಆಡಳಿತ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳು ಸರ್ವೇ ಮಾಡಬೇಕು. ಈ ಕುರಿತು ಒಂದು ದಿನ ಮುಂಚಿತವಾಗಿ ಡಂಗೂರ ಸಾರಿ, ಸಮೀಕ್ಷೆಯ ನಿಖರ ವರದಿ ಸಲ್ಲಿಸಬೇಕು. ತಪ್ಪು ವರದಿ ಸಲ್ಲಿಸಿದರೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net