ಬೆಳೆ ಸಮೀಕ್ಷೆ ಕಾರ್ಯ ಅಚ್ಚುಕಟ್ಟಾಗಿರಲಿ:ಡಿಸಿ ನಲಿನ್ ಸೂಚನೆ

2908-Kpl-Ravi-4
Published on

ಕೊಪ್ಪಳ: ಬೆಳೆ ಸಮೀಕ್ಷಾ ಕಾರ್ಯ ಆರಂಭವಾಗಿದ್ದು, ಮಂಗಳವಾರ ಜಿಲ್ಲಾಧಿಕಾರಿ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಮೀಕ್ಷಾ ಕಾರ್ಯ ಅಚ್ಚುಕಟ್ಟಾಗಿ ನಡೆಸುವಂತೆ ಸೂಚಿಸದರು.


ಕುಷ್ಟಗಿ ತಾಲೂಕಿನ ಯರಗೇರಾ, ಡೊಣ್ಣೆಗುಡ್ಡ ಗ್ರಾಮಗಳಿಗೆ ತೆರಳಿ ಬೆಳೆ ಸಮೀಕ್ಷೆ ಕಾರ್ಯ ವೀಕ್ಷಿಸಿದರು. ರೈತರೊಂದಿಗೆ ಚರ್ಚಿಸಿದರು. ಯರಗೇರಾ ಗ್ರಾಮದ ರಾಮಪ್ಪ ಜಮೀನಿಗೆ ತೆರಳಿ ಸಮೀಕ್ಷೆ ವೀಕ್ಷಿಸಿದರು. ಸೂಕ್ತವಾಗಿ ಪರಿಶೀಲಿಸಿ ಅನುಮೋದನೆ ನೀಡುವಂತೆ ಸೂಪರ್‌ವೈಸರ್‌ಗಳಿಗೆ ನಿರ್ದೇಶಿಸಿದರು.
ಈ ಬೆಳೆ ಸಮೀಕ್ಷೆಯಿಂದ ಬೆಳೆವಿಮೆ, ಬೆಳೆಹಾನಿ ಪರಿಹಾರ, ಬೆಳೆಸಾಲ ಪಡೆಯುವುದಕ್ಕೆ ಅನುಕೂಲವಾಗಲಿದೆ. ರೈತರೇ ಬೆಳೆ ಸಮೀಕ್ಷೆ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ವಿವರ ದಾಖಲಿಸಬಹುದು. ಆ.15ರಿಂದ ಸಮೀಕ್ಷಾ ಕಾರ್ಯ ಆರಂಭವಾಗಿದ್ದು, ಸೆ.10ವರೆಗೆ ನಡೆಯಲಿದೆ. ತಾಲೂಕುವಾರು ನೇಮಕಗೊಂಡ ಪಿಆರ್‌ಗಳು ಪ್ರತಿದಿನ ನಿಗದಿಪಡಿಸಿದಷ್ಟು ಪ್ಲಾಟ್‌ಗಳ ಸಮೀಕ್ಷೆ ಕ್ರಮಬದ್ಧವಾಗಿ ನಡೆಸುವಂತೆ ತಿಳಿಸಿದರು.


ಕನಕಗಿರಿ ತಾಲೂಕಿನಲ್ಲಿ 29, ಕುಕನೂರಿನಲ್ಲಿ 66, ಯಲಬುರ್ಗಾ 95, ಕುಷ್ಟಗಿ 51, ಕೊಪ್ಪಳ 89, ಗಂಗಾವತಿ 39 ಮತ್ತು ಕಾರಟಗಿ 44 ಸೇರಿ 413 ಪಿಆರ್‌ಗಳನ್ನು ನೇಮಿಸಲಾಗಿದೆ. 3,26,082 ಪ್ಲಾಟ್‌ಗಳ ಸಮೀಕ್ಷೆಯಾಗಬೇಕಿದ್ದು, ಒಬ್ಬೊಬ್ಬ ಪಿಆರ್ ದಿನಕ್ಕೆ ಕಡ್ಡಾಯವಾಗಿ 100 ಪ್ಲಾಟ್ ಮಾಡಬೇಕು. ಈವರೆಗೆ 71,000 ಪ್ಲಾಟ್‌ಗಳು ಪೂರ್ಣಗೊಂಡಿದ್ದು ಶೇ.22 ರಷ್ಟು ಪ್ರಗತಿಯಾಗಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು.


ಬಳಿಕ ಡೊಣ್ಣೆಗುಡ್ಡ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಡಿಸಿ ಮಕ್ಕಳ ಹಾಜರಾತಿ, ಆಹಾರ ಧಾನ್ಯ ಗುಣಮಟ್ಟ, ಶಾಲಾ ಚಟುವಟಿಕೆಗಳನ್ನು ಪರಿಶೀಲಿಸಿದರು. ಕುಷ್ಟಗಿ ತಹಸೀಲ್ದಾರ್ ಶ್ರುತಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ, ಕೃಷಿ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ವಿ. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net