ಬೆಳೆ ಸಮೀಕ್ಷೆಯಲ್ಲಿ ಎಡವಟ್ಟು !

3 NRD-1 (Small Size)
Published on

ರಾಜು ಹೊಸಮನಿ ನರಗುಂದ

ಕೃಷಿ ಇಲಾಖೆಯ ಬೆಳೆ ಸಮೀಕ್ಷೆ ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದಾಗಿ ಕಡಲೆ ಬೆಳೆಗಾರರು ಪರದಾಡುವ ಪರಿಸ್ಥಿತಿ ತಲೆದೋರಿದೆ. ಬೆಂಬಲ ಬೆಲೆ ಯೋಜನೆಯಡಿ ಕಡಲೆ ಮಾರಾಟ ಮಾಡಲು ಸಾಕಷ್ಟು ತಾಪತ್ರಯ ಎದುರಿಸುವಂತಾಗಿದೆ.

ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಯ 41 ಸಿಬ್ಬಂದಿ ಜಂಟಿಯಾಗಿ ಹಿಂಗಾರು ಹಂಗಾಮಿನ ಕಡಲೆ, ಜೋಳ, ಸೂರ್ಯಕಾಂತಿ, ಗೋಧಿ, ಕುಸುಬೆ ಸೇರಿ 20,534 ಹೆಕ್ಟೇರ್ ಪ್ರದೇಶದ ಬೆಳೆಗಳ ಸಮೀಕ್ಷೆ ಮಾಡಿ ಮುಗಿಸಿದ್ದಾರೆ. ಹಿಂಗಾರು ಹಂಗಾಮಿನ ಬಹುತೇಕ ಬೆಳೆಗಳು ಸಾಮಾನ್ಯವಾಗಿ ಜನವರಿ ಕೊನೇ ವಾರದಲ್ಲಿ ಕಟಾವಿಗೆ ಬರಲಾರಂಭಿಸುತ್ತವೆ.

ಅದರಂತೆ ಬೆಳೆ ಕಟಾವು ಮಾಡಿಕೊಂಡು ಖರೀದಿ ಕೇಂದ್ರಕ್ಕೆ ಆಗಮಿಸಿದ ಅನೇಕ ರೈತರಿಗೆ ಕೃಷಿ ಇಲಾಖೆಯ ತಂತ್ರಾಂಶದಲ್ಲಿ ಅಧಿಕಾರಿಗಳು ತಪ್ಪಾಗಿ ಬೆಳೆ ನೋಂದಣಿ ಮಾಡಿರುವುದರಿಂದ ರೈತರು ನೂರೆಂಟು ಸಮಸ್ಯೆ ಎದುರಿಸುವಂತಾಗಿದೆ. ಬೆಳೆ ಸಮೀಕ್ಷೆ ಮಾಡಿ ರೈತರ ಉತಾರದಲ್ಲಿ ಇಂಥದ್ದೇ ಬೆಳೆ ಇದೆ ಎಂದು ನಮೂದಿಸಬೇಕಾದ ಕೃಷಿ ಇಲಾಖೆ ಅಧಿಕಾರಿಗಳು ಜನವರಿ ಮಧ್ಯ ಭಾಗದಿಂದ ಸಮೀಕ್ಷೆಯನ್ನು ಆರಂಭಿಸಿದ್ದಾರೆ. ಬಹಳಷ್ಟು ರೈತರು ತಮ್ಮ ಬೆಳೆಗಳನ್ನು ಕಟಾವು ಮಾಡಿಕೊಂಡು ಹೋದ ನಂತರ ಸಮೀಕ್ಷೆ ಮಾಡಿದ್ದಾರೆ. ಅಲ್ಲದೆ, ಉತಾರದಲ್ಲಿ ಬೇರೆ ಬೆಳೆಗಳನ್ನು ತಪ್ಪಾಗಿ ನಮೂದಿಸಿದ್ದಾರೆ. ಇದರಿಂದಾಗಿ, ಈಗ ರೈತರು ಪರದಾಡುವಂತಾಗಿದೆ.

ಕೆಲ ರೈತರ ಹೊಲಗಳಿಗೆ ಇದೀಗ ತೆರಳಿರುವ ಅಧಿಕಾರಿಗಳು ಸದ್ಯದ ಸ್ಥಿತಿಯನ್ನು ನೋಡಿ ಅದನ್ನೇ ಬೆಳೆದರ್ಶಕ ಆಪ್​ನಲ್ಲಿ ಅಪ್​ಲೋಡ್ ಮಾಡಿದ್ದಾರೆ. ಬೆಳೆಗಳು ಇಲ್ಲದ ಹೊಲಗಳಿಗೆ ಕಟಾವು ಎಂದು ನಮೂದಿಸಿದ್ದಾರೆ. ಇದರಿಂದ ಹಿಂಗಾರು ಬೆಳೆದಿದ್ದರೂ ಇಂತಹ ರೈತರ ಉತಾರದಲ್ಲಿ ಇದೀಗ ಯಾವುದೇ ಬೆಳೆ ಇಲ್ಲ ಎಂಬಂತೆ ನಮೂದಾಗಿದೆ. ಇದೇ ಉತಾರವನ್ನು ಕಡಲೆ ಖರೀದಿ ಕೇಂದ್ರಕ್ಕೆ ತೆಗೆದುಕೊಂಡು ಹೋದರೆ ಅಲ್ಲಿನ ಆಪ್ ತಂತ್ರಾಂಶದಲ್ಲಿ ಸ್ವೀಕರಿಸುತ್ತಿಲ್ಲ. ಹಾಗಾಗಿ ಅಂತಹ ರೈತರ ಹೆಸರುಗಳು ಖರೀದಿ ಕೇಂದ್ರದಲ್ಲಿ ನೋಂದಣಿಯಾಗುತ್ತಿಲ್ಲ. ಈ ರೈತರು ಮತ್ತೆ ಕಂದಾಯ ಇಲಾಖೆ ಸಂರ್ಪಸಿ ಅದನ್ನು ಸರಿಪಡಿಸಿಕೊಳ್ಳಬೇಕು. ಇದರಿಂದಾಗಿ ರೈತರಿಗೆ ವಿನಾಕಾರಣ ಸಮಸ್ಯೆ ಎದುರಾಗಿದೆ.

ಸಮೀಕ್ಷೆಯಲ್ಲೂ ಗೋಲ್ಮಾಲ್:ಸಮೀಕ್ಷೆ ಮಾಡುವವರು ಹೊಲದ ಒಂದು ಮೂಲೆಯಲ್ಲಿ ನಿಂತು ಫೋಟೋ ತೆಗೆದು ಅಕ್ಕಪಕ್ಕದ ಸರ್ವೆ ನಂಬರ್​ಗಳಿಗೆ ಅದೇ ಫೋಟೋ ಅಪ್​ಲೋಡ್ ಮಾಡಿರುವ ಬಗ್ಗೆ ಅನೇಕ ರೈತರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ರೀತಿ ಮಾಡಿದ್ದರಿಂದ ಕಡಲೆ ಬೆಳೆದಿರುವ ಅದೆಷ್ಟೋ ರೈತರ ಉತಾರದಲ್ಲಿ ಗೋಧಿ, ಸೂರ್ಯಕಾಂತಿ, ಜೋಳ ಇತ್ಯಾದಿ ಬೆಳೆಗಳ ಹೆಸರುಗಳು ನಮೂದಾಗಿವೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಬರೀ 200 ನೋಂದಣಿ:ರಾಜ್ಯ ಸರ್ಕಾರ ಫೆ. 11ರಿಂದ ಕಡಲೆಗೆ ಬೆಂಬಲ ಬೆಲೆ ಖರೀದಿಗೆ ಆದೇಶಿಸಿದೆ. ನರಗುಂದ ತಾಲೂಕಿನಲ್ಲಿ ಈವರೆಗೆ 200 ರೈತರು ಮಾತ್ರ ನೋಂದಣಿ ಮಾಡಿಸಿಕೊಂಡಿದ್ದಾರೆ.

ನರಗುಂದ ತಾಲೂಕಿನ ರೈತರು ಪ್ರತಿ ವರ್ಷಕ್ಕಿಂತ ಈ ವರ್ಷ 20 ದಿನ ತಡವಾಗಿ ಕಡಲೆ ಬಿತ್ತನೆ ಮಾಡಿದ್ದಾರೆ. ಆದರೂ, ನಮ್ಮ ಅಧಿಕಾರಿಗಳು ಎಲ್ಲ ಬೆಳೆಗಳ ಸಮೀಕ್ಷೆ ಕಾರ್ಯ ಈಗಾಗಲೇ ಪೂರ್ಣಗೊಳಿಸಿದ್ದಾರೆ. ಕೆಲವೊಂದಿಷ್ಟು ಸಣ್ಣಪುಟ್ಟ ಸಮಸ್ಯೆಗಳಿಂದ ಹಿಂಗಾರು ಬೆಳೆ ಸಮೀಕ್ಷೆಗೆ ತೆರಳಿದ ಅಧಿಕಾರಿಗಳಿಗೆ ಆಪ್​ನಲ್ಲಿ ಅಳವಡಿಸುವುದು ಸ್ವಲ್ಪ ವಿಳಂಬವಾಗಿದೆ. ಇದರಿಂದ ಕೆಲ ರೈತರ ಉತಾರದಲ್ಲಿ ಬೇರೆ ಬೆಳೆಗಳ ಹೆಸರು ನಮೂದಾಗಿರುವ ಆರೋಪ ಕೇಳಿಬಂದಿದ್ದು, ತಕ್ಷಣ ಕಂದಾಯ ಇಲಾಖೆಯಿಂದ ಸಮಸ್ಯೆ ಸರಿಪಡಿಸಿಕೊಡಲಾಗುವುದು.| ಶ್ರೀಶೈಲ ಅಂಗಡಿ

ಕೃಷಿ ಅಧಿಕಾರಿ, ನರಗುಂದ

ರೈತರೊಂದಿಗೆ ಸೇರಿ ಸಾಕಷ್ಟು ಹೋರಾಟ ಮಾಡಿದ್ದರಿಂದ ಸರ್ಕಾರ ಇತ್ತೀಚೆಗೆ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಆರಂಭಿಸಿದೆ. ಕೃಷಿ ಅಧಿಕಾರಿಗಳು ಸರಿಯಾಗಿ ಬೆಳೆ ಸಮೀಕ್ಷೆ ಮಾಡದೆ ಕೆಲ ಫೋಟೋಗಳನ್ನು ಪಡೆದು ಅವುಗಳನ್ನು ಮನೆಯಲ್ಲಿಯೇ ಕುಳಿತು ಅಪ್​ಲೋಡ್ ಮಾಡಿದ್ದಾರೆ. ಇದರಿಂದ ಕಡಲೆ ಬೆಳೆದಿರುವ ಅರ್ಹ ರೈತರ ಉತಾರದಲ್ಲಿ ಬೇರೆ ಬೆಳೆಗಳ ಹೆಸರು ನಮೂದಾಗಿದೆ. ಜಿಲ್ಲಾಡಳಿತ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಸಮಸ್ಯೆ ಬಗೆಹರಿಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. | ವೀರೇಶ ಸೊಬರದಮಠ ರೈತ ಹೋರಾಟಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net