

ಕಲಬುರಗಿ: ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ೫.೭೭ ಲಕ್ಷ ಹೆಕ್ಟೆರ್ ತೊಗರಿ ಬಿತ್ತನೆಯಾಗಿದ್ದು, ಸರ್ಕಾರದ ವರದಿ ಪ್ರಕಾರ ೧.೯೪ ಲಕ್ಷ ಬೆಳೆ ಹಾನಿಯಾಗಿದೆ. ರೈತರು ೧೬೨ ಕೋಟಿ ರೂ. ವಿಮೆ ಹಣ ಕಟ್ಟಿದ್ದು, ರೈತರಿಗೆ ೧೦೦ ಕೋಟಿ ರೂ. ಓಟಿಎಸ್ ಯೋಜನೆ ಅಡಿಗೆ ಜಮಾ ಆಗಿದೆ. ಶೇ.೧೧ರಷ್ಟು ಮಾತ್ರ ಜಮಾ ಆಗಿದೆ ಎಂದು ನವ ಕರ್ನಾಟಕ ರೈತ ಸಂಘದ ಅಧ್ಯಕ್ಷ ದಯಾನಂದ ಪಾಟೀಲ್ ತಿಳಿಸಿದರು.
ನಿಯಮದ ಪ್ರಕಾರ ಶೇ.೨೫ ಓಟಿಎಸ್ ಬಿಡುಗಡೆಯಾಗಬೇಕಿತ್ತು. ಆದರೆ ಶೇ.೧೧ ಮಾತ್ರ ಆಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಆದೇಶಿಸಿದರೂ ವಿಮಾ ಕಂಪನಿಯುವರು ಸ್ಪಂದಿಸದೆ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಕೂಡಲೇ ಕ್ವಿಂಟಾಲ್‌ಗೆ ೧೫ ಸಾವಿರ ರೂ. ಬೆಂಬಲ ಬೆಲೆ ಅಡಿ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ದೇಶದಲ್ಲಿ ದ್ವಿದಳ ದಾನ್ಯ ಶೇ.೧೦ ಮಾತ್ರ ಬೆಳೆಯುತ್ತಿದ್ದು, ಶೇ.೯೦ ಆಮದು ಮಾಡಿಕೊಳ್ಳಲಾಗುತ್ತಿದೆ ಎನ್ನುತ್ತಾರೆ. ನಮ್ಮಲ್ಲಿ ರೈತರಿಗೆ ಸೂಕ್ತ ಬೆಂಬಲ ನೀಡದ ಕಾರಣಕ್ಕೆ ತೊಗರಿ ಬಿಟ್ಟು ಹತ್ತಿ ಬೆಳೆಯತ್ತ ಗಮನಹರಿಸಲಾಗುತ್ತಿದೆ. ಸರ್ಕಾರ ತೊಗರಿ ಬೆಳೆ ರೈತರಿಗೆ ಪ್ರೋತ್ಸಾಹಿಸಬೇಕು, ಬೆಳೆ ವಿಮೆ ಶೇ.೨೫ ಓಟಿಎಸ್ ಒದಗಿಸಬೇಕು. ಜಿಲ್ಲೆಯಲ್ಲಿ ೧೦ ಲಕ್ಷ ಹೆಕ್ಟೆರ್ ತೊಗರಿ ಬೆಳೆಯುವ ಗುರಿ ಹೊಂದಬೇಕು ಎಂದು ಆಗ್ರಹಿಸಿದರು.
ಉಪಾಧ್ಯಕ್ಷ ಸಿದ್ದರಾಮ ಪಾಟೀಲ್, ರಾಜಶೇಖರ ಕಲಬುರಗಿ, ಶಿವಶರಣಪ್ಪ ಮೈಂದರಗಿ, ಶಿವರಾಜ ಡೋಣೂರ ಇದ್ದರು.