ಬೆಳೆ ವಿಮೆ, ಬೆಳೆ ಪರಿಹಾರಕ್ಕೆ ಆಗ್ರಹ

Raitha Sangha
Published on

ಚಿತ್ರದುರ್ಗ: ರೈತರ ಸಭೆ ಕರೆದು ಕೂಡಲೇ ಬೆಳೆ ವಿಮೆ, ಪರಿಹಾರ ಬಿಡುಗಡೆಗೆ ಆಗ್ರಹಿಸಿ ರಾಜ್ಯ ರೈತಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಎಡಿಸಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

2024ರಲ್ಲಿ ಈರುಳ್ಳಿ ಬೆಳೆ ನಷ್ಟವಾಗಿದ್ದು, ರೈತರು ಕೈ ಸುಟ್ಟುಕೊಂಡಿದ್ದಾರೆ. ಕೃಷಿ ಇಲಾಖೆಯಿಂದ ತೊಗರಿ ಬೀಜ ಖರೀದಿಸಿ ಬಿತ್ತನೆ ಮಾಡಿದ್ದು, ಹೂವು ಕೂಡ ಬಿಟ್ಟಿಲ್ಲ. ಆದರೂ ರೈತರಿಗೆ ಪರಿಹಾರ ಸಿಕ್ಕಿಲ್ಲ. ಚಳ್ಳಕೆರೆ ತಾಲೂಕಿಗೆ ಬೆಳೆ ವಿಮೆ ಸಂಪೂರ್ಣವಾಗಿ ಬಂದಿಲ್ಲ ಎಂದು ಅಳಲು ತೋಡಿಕೊಂಡರು.

ಅನೇಕ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿರುವ ರೈತರು ಸಾಲಗಾರರ ಕಾಟಕ್ಕೆ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಆದ್ದರಿಂದ ಮೇ 31ರೊಳಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ತುರ್ತಾಗಿ ಸಭೆ ಕರೆದು ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ, ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದರು.

ದೇವರಹಳ್ಳಿಯ ರೈತರ ಜಮೀನಿನಲ್ಲಿ ಕೆಪಿಟಿಸಿಎಲ್‌ನಿಂದ ಬೃಹತ್ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. 4 ವರ್ಷವಾದರೂ ಪರಿಹಾರ ಬಂದಿಲ್ಲ. ಈ ಕುರಿತು ಕ್ರಮವಹಿಸದಿದ್ದಲ್ಲಿ ಕೆಡಿಪಿ ಸಭೆಯಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಸಿದರು.

ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾಧ್ಯಕ್ಷ ಧನಂಜಯ, ಮುಖಂಡರಾದ ಒ.ಟಿ.ತಿಪ್ಪೇಸ್ವಾಮಿ, ಕೆ.ಸಿ.ಹೊರಕೇರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಎಸ್.ಮಂಜುನಾಥ್, ಜಿ.ಬಿ.ಪಾಪಣ್ಣ, ಬಸ್ತಿಹಳ್ಳಿ ಜಿ.ಸುರೇಶ್‌ಬಾಬು, ಎಸ್.ಸಿದ್ದಪ್ಪ, ಆರ್.ಚೇತನ, ಬಿ.ತಿಪ್ಪೇಸ್ವಾಮಿ, ವಿ.ಕಲ್ಪನಾ, ಡಿ.ಎಸ್.ಹಳ್ಳಿ ಸುಧಾ, ಆರ್.ಲಕ್ಷ್ಮ್ಮಕ್ಕ, ಟಿ.ಮುನಿಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net