

ಮುಂಡಗೋಡ: ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ತಾಲೂಕಿನ ಮಳಗಿ ಗ್ರಾಮದಲ್ಲಿ ಗುರುವಾರ ಶಿರಸಿ- ಹುಬ್ಬಳ್ಳಿ ರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು.
ಪ್ರಸಕ್ತ ವರ್ಷ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಇದರಿಂದ ಎಲ್ಲ ಬೆಳೆಗಳು ಹಾಳಾಗಿವೆ. ಕೂಡಲೆ ಬೆಳೆ ವಿಮೆ ಬಿಡುಗಡೆ ಮಾಡಬೇಕು. ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ರಾಜ್ಯ ಸರ್ಕಾರ ರೈತರ ಖಾತೆಗಳಿಗೆ ಪರಿಹಾರ ಜಮೆ ಮಾಡಬೇಕು. ರೈತ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಅತಿಕ್ರಮಣದಾರರಿಗೆ ಹಕ್ಕುಪತ್ರ ನೀಡಿ, ಬೆಳೆ ಹಾನಿ ಪರಿಹಾರ ನೀಡಬೇಕು ಹಾಗೂ ಉಳಿದ ರೈತರ ಜಿಪಿಎಸ್ ಮಾಡಿ ಹಕ್ಕುಪತ್ರ ನೀಡಬೇಕು. ವಿದ್ಯುತ್ ಇಲಾಖೆ ಖಾಸಗೀಕರಣ ಕೈಬಿಡಬೇಕು. ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯಯನ್ನು ಕೂಡಲೆ ದುರಸ್ತಿಪಡಿಸಬೇಕು. ಅಡಕೆ ಬೆಳೆಗೆ ವಿಮೆ ಹಾಗೂ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ತಹಸೀಲ್ದಾರ್ ಶಂಕರ ಗೌಡಿ ಅವರು ರೈತರಿಂದ ಮನವಿ ಸ್ವೀಕರಿಸಿ, ಈ ಕುರಿತು ಜ. 29ರಂದು ತಹಸೀಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಕೈಬಿಡಲಾಯಿತು.
ರಾಜ್ಯ ಹೆದ್ದಾರಿಯ ಮೇಲೆ ನೂರಾರು ರೈತರು ಕುಳಿತು ಪ್ರತಿಭಟನೆ ನಡೆಸಿದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಪರದಾಡುವಂತಾಯಿತು.
ಸತೀಶ ನಾಯ್ಕ, ರಾಘವೇಂದ್ರ ಕಿರವತ್ತಿ, ಶಂಕ್ರಪ್ಪ ಗಾಣಿಗ, ಮರ್ದಾನಸಾಬ ಜನಗೇರಿ, ಆನಂದ ಪೂಜಾರಿ, ಪ್ರಕಾಶ ಪಾಲಿಕೊಪ್ಪ, ಕೃಷ್ಣಾ ಕ್ಯಾರಕಟ್ಟಿ, ಪ್ರಮೋದ ಜಕ್ಕಣವರ, ದೇವೇಂದ್ರ ನಾಯ್ಕ, ಶಿವಪ್ಪ ನಾಯ್ಕ, ಜಗದೀಶ ದಾಸರ, ನೂರಾರು ರೈತರು ಪ್ರತಿಭಟನೆಯಲ್ಲಿದ್ದರು.