ಬೆಳೆ ವಿಮೆ ಪಾವತಿಗೆ ಜು.31 ಕೊನೇ ದಿನ

Published on

ಸೋಮವಾರಪೇಟೆ: ಅಡಕೆ ಮತ್ತು ಕಾಳು ಮೆಣಸನ್ನೊಳಗೊಂಡ ಹವಾಮಾನ ಆಧಾರಿತ ಬೆಳೆ ವಿಮೆ ಕಂತು ಪಾವತಿಗೆ ಜುಲೈ 31 ಕೊನೆ ದಿನವಾಗಿದ್ದು, ಆಸಕ್ತ ಬೆಳೆಗಾರರು ಕಚೇರಿ ಸಂಪರ್ಕಿಸುವಂತೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ್ ಜೆ.ಶೆಟ್ಟಿ ತಿಳಿಸಿದ್ದಾರೆ.


ಸರ್ಕಾರ 2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿದೆ. ಹವಾಮಾನ ಆಧಾರಿತ ಅಂಶಗಳಾದ ಮಳೆಯ ಪ್ರಮಾಣ, ತಾಪಮಾನ ಮತ್ತಿತರ ಮಾಹಿತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಿಸುವ ಅಂಶಗಳ ಆಧಾರದ ಮೇಲೆ ಬೆಳೆ ವಿಮೆ ನಷ್ಟವನ್ನು ತೀರ್ಮಾನಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


2023-24ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಬೆಳೆವಾರು ವಿಮಾ ಮೊತ್ತ ಕಾಳುಮೆಣಸು ಬೆಳೆಗೆ ಒಟ್ಟು 47 ಸಾವಿರ ರೂ. ಹಾಗೂ ಅಡಕೆ ಬೆಳೆಗೆ 1,28,000 ರೂ. ಆಗಿದೆ. ವಿಮಾ ಕಂಪನಿಗೆ ಒಟ್ಟು ವಿಮಾ ಮೊತ್ತಕ್ಕೆ ರೈತರು ಕಾಳುಮೆಣಸು ಬೆಳೆಗೆ ಶೇ.5 ರ ವಿಮಾ ಮೊತ್ತ 2,350 ರೂ. ಹಾಗೂ ಅಡಕೆ ಬೆಳೆಗೆ 6,400 ರೂ. ಪ್ರತಿ ಹೆಕ್ಟೇರ್‌ಗೆ ಪಾವತಿಸಬೇಕಿದೆ.


ವಿಮಾ ಕಂತಿನ ಮೊತ್ತ ವಿವರ: ಕಾಳು ಮೆಣಸು ಪ್ರತಿ ಹೆಕ್ಟೇರ್‌ಗೆ 47 ಸಾವಿರ ರೂ., ರೈತರು ಪಾವತಿಸಬೇಕಾಗಿರುವ ಪ್ರೀಮಿಯಂ (ಶೇ.5) 2,350 ರೂ., ಅಡಕೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ವಿಮೆ 1,28,000 ರೂ., ರೈತರು ಪಾವತಿಸಬೇಕಾಗಿರುವ ಪ್ರೀಮಿಯಂ (ಶೇ.5) 6,400 ರೂ. ವಿಮಾ ಅನ್ವಯಿಸುವ ಅವಧಿ ಆಗಸ್ಟ್ 1 ರಿಂದ 2024ರ ಜುಲೈ 31ರವರೆಗೆ. ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರು ವಿಮಾ ಮೊತ್ತವು ಪಾವತಿಸಬೇಕಾದ ವಿಮಾ ಕಂತಿನ ಮೊತ್ತವು ಒಂದೇ ಆಗಿದೆ.


ಜಿಲ್ಲೆಯಲ್ಲಿ ಬೆಳೆ ಸಾಲ ಪಡೆದ ರೈತರು ಹಾಗು ಸಾಲ ಪಡೆಯದ ರೈತರು ವಿಮೆ ಯೋಜನೆಯಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ವಿಮೆ ಮಾಡಿಸಲು ಇಚ್ಛಿಸುವ ರೈತರು ಅರ್ಜಿಯೊಂದಿಗೆ ಪಹಣಿ ಪತ್ರ, ಬ್ಯಾಂಕ್ ಖಾತೆ, ಪಾಸ್ ಪುಸ್ತಕ, ಆಧಾರ್ ಕಾರ್ಡ್ ನಕಲು ಪ್ರತಿಗಳನ್ನು ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳನ್ನು ಲಗತ್ತಿಸಿ ಹತ್ತಿರದ ಬ್ಯಾಂಕ್ ಅಥವಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ ಗ್ರಾಮ ಒನ್ ಕೇಂದ್ರಗಳಲ್ಲಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ವಿಮಾ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಮೀಪದ ಬ್ಯಾಂಕ್ ಶಾಖೆ, ಕ್ಷೇಮಾ ಜನರಲ್ ವಿಮಾ ಸಂಸ್ಥೆ ಹಾಗೂ ರೈತ ಸಂಪರ್ಕ ಕೇಂದ್ರದ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net