

ಕಲಘಟಗಿ: ತಾಲೂಕಿನ ರೈತರ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ರೈತರು ಪಟ್ಟಣದಲ್ಲಿ ಬುಧವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ಗೆ ಮನವಿ ಅರ್ಪಿಸಿದರು.
ತಾಲೂಕಿನ ಎಲ್ಲ ರೈತರಿಗೆ ಬೆಳೆ ವಿಮೆ, ಬೆಳೆ ಹಾನಿ ಪರಿಹಾರ, ಸಾಲ ಮನ್ನಾ ಮತ್ತಿತರ ಯೋಜನೆಗಳ ಸೌಲಭ್ಯಗಳು ರೈತರ ಕೈಗೆಟಕುತ್ತಿಲ್ಲ. ವೃದ್ಧಾಪ್ಯ, ವಿಧವಾ ವೇತನ ಮತ್ತಿತರ ಮಾಸಾಶನಗಳು ಫಲಾನುಭವಿಗಳಿಗೆ ನಾಲ್ಕೈದು ತಿಂಗಳಿಂದ ಸಮರ್ಪಕವಾಗಿ ಸಿಗುತ್ತಿಲ್ಲ. ನೆರೆ ಹಾವಳಿಯಿಂದ ಸೂರು, ಬೆಳೆ ಕಳೆದುಕೊಂಡ ಸಂತ್ರಸ್ತರ ಬದುಕು ದುಸ್ತರವಾಗಿದೆ. ಅವರಿಗೆ ದೊರಕಬೇಕಾದ ಪರಿಹಾರ ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಉತ್ತರ ಕರ್ನಾಟಕದ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ನೇತೃತ್ವದಲ್ಲಿ ತಾಲೂಕು ದಂಡಾಧಿಕಾರಿ ಅಶೋಕ ಶಿಗ್ಗಾಂವಿ ಅವರಿಗೆ ಮನವಿ ಸಲ್ಲಿಸಲಾಯಿತು.
ಇದಕ್ಕೂ ಮುನ್ನ ಪ್ರತಿಭಟನಾ ಮೆರವಣಿಗೆ ಪಟ್ಟಣದ ಹನ್ನೆರಡು ಮಠದಿಂದ ರಾಷ್ಟ್ರೀಯ ಹೆದ್ದಾರಿಗುಂಟ ಸಾಗಿ ಬಾಲ ಮಾರುತಿ ವೃತ್ತದಲ್ಲಿ ಸಭೆ ನಡೆಸಿ ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಘೊಷಣೆ ಕೂಗಲಾಯಿತು. ಇದರಿಂದ ಕೆಲ ಸಮಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.
ರವಿ ತಿರ್ಲಾಪೂರ, ಮಲ್ಲಪ್ಪ ನೇಸರ್ಗಿ, ಕಲ್ಮೇಶ ಲಿಗಾಡಿ, ಚಂದ್ರಶೇಖರ ಕಬ್ಬೂರ, ಸುರೇಶ ದೊಡಮನಿ, ಬೈಲಪ್ಪ ಆಚಗೊಂಡ, ಶಿವನಗೌಡ ಸಿಂಧೋಗಿ, ಜ್ಯೋತಿಬಾ ಹುಲಕೊಪ್ಪ, ಫಕೀರಗೌಡ ಹೂವನ್ನವರ, ತಿಪ್ಪಣ್ಣ ಬಾಗೋಡಿ, ಅಮೃತ ಕಂಬಾರ, ಹನುಮಂತಗೌಡ ಪಾಟೀಲ, ಉಳವಪ್ಪ ದಿವಟಗಿ, ಈರಣ್ಣ ಮುಗದ, ಮಲ್ಲಮ್ಮ ಶಿರಗುಪ್ಪಿ ಇತರರಿದ್ದರು.