

ಚಿತ್ರದುರ್ಗ: ಬೆಳೆ ವಿಮೆ ಪರಿಹಾರ ಜಮಾ ಆಗದ ರೈತರ ಜಮೀನುಗಳಲ್ಲಿ ಮರು ಪರಿಶೀಲನೆ ನಡೆಸಿ, ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ರೈತರಿಗೆ ಭರವಸೆ ನೀಡಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಬೆಳೆ ವಿಮೆ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದರು.
ಬೆಳೆ ಸಮೀಕ್ಷೆ ವೇಳೆ ಉಂಟಾದ ವ್ಯತ್ಯಾಸದಿಂದ ಚಳ್ಳಕೆರೆ ತಾಲೂಕಿನ ಸೋಮಗುದ್ದು, ಎನ್.ದೇವರಹಳ್ಳಿ ಸೇರಿ ಜಿಲ್ಲೆಯ ವಿವಿಧ ಗ್ರಾಪಂ ವ್ಯಾಪ್ತಿಯ ರೈತರಿಗೆ ಬೆಳೆ ವಿಮೆ ಪರಿಹಾರ ಜಮೆ ಆಗದಿರುವುದು ಗಮನಕ್ಕೆ ಬಂದಿದೆ ಎಂದರು.
ಚಳ್ಳಕೆರೆ ತಾಲೂಕು ರಾಜ್ಯದಲ್ಲೇ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶವೆಂಬುದು ಗೊತ್ತಿದೆ. ಹೀಗಿರುವಾಗ ಕೆಲ ಭಾಗಗಳ ರೈತರಿಗೆ ಬೆಳೆ ವಿಮೆ ವಿತರಣೆಯಾಗದಿರುವ, ಪಾವತಿಯಲ್ಲೂ ವ್ಯತ್ಯಾಸ ಆಗಿರುವ, ಗಣಕಯಂತ್ರ ಕೇಂದ್ರಗಳಲ್ಲಿ ಮಾಹಿತಿ ದಾಖಲಿಸುವ ವೇಳೆ ಆಗಿರುವ ತಪ್ಪುಗಳು ಕೂಡ ಗಮನಕ್ಕೆ ಬಂದಿದೆ. ಈ ಸಂಬಂಧ ಚರ್ಚಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಬೆಳೆ ಸಮೀಕ್ಷೆ ಕ್ರಮ ಬದ್ಧವಾಗಿಲ್ಲ. ಮಳೆಯಾಶ್ರಿತ ತಾಕುಗಳಲ್ಲಿ ನಡೆಸಬೇಕಾದ ಬೆಳೆ ಕಟಾವು ಪ್ರಯೋಗ ನೀರಾವರಿ ಜಮೀನುಗಳ ಸರ್ವೇ ನಂಬರ್‌ಗಳಲ್ಲಿ ನಡೆಸಲಾಗಿದೆ. ಈ ಅಚಾತುರ್ಯಕ್ಕೆ ಕಾರಣರಾದ ಪಿಡಿಒಗಳಿಗೆ ನೋಟಿಸ್ ನೀಡಲಾಗಿದೆ. ವರದಿ ಆಧರಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಳೆ ಸಮೀಕ್ಷೆ ತಪ್ಪಿನಿಂದಾಗಿ ಇಡೀ ಗ್ರಾಪಂ ವ್ಯಾಪ್ತಿಯ ಎಲ್ಲ ಹಳ್ಳಿಗಳಿಗೂ ಪರಿಣಾಮ ಬೀರಿದೆ ಎಂದು ರೈತರು ಮಾಹಿತಿ ನೀಡಿದ್ದು, ಇದು ಅವೈಜ್ಞಾನಿಕ ಕ್ರಮ. ಈ ಕುರಿತು ಸೂಕ್ತ ಕ್ರಮಕೈಗೊಂಡು ಬೆಳೆ ನಷ್ಟ ಉಂಟಾದ ರೈತರಿಗೆ ಕಡ್ಡಾಯವಾಗಿ ಬೆಳೆವಿಮೆ ಪಾವತಿಗೆ ಕ್ರಮವಹಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ರೈತರಿಗೆ ನೀಡುವ ಬೆಳೆ ವಿಮೆ, ಸರ್ಕಾರಿ ಸೌಲಭ್ಯ ಸೇರಿ ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಹಣವನ್ನು ರೈತರ ಸಾಲದ ಖಾತೆಗಳಿಗೆ ಜಮಾ ಮಾಡುವಂತಿಲ್ಲ. ಈಗಾಗಲೇ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೂ ಸೂಚಿಸಲಾಗಿದೆ ಎಂದು ಹೇಳಿದರು.
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಮಾತನಾಡಿ, ಸೋಮಗುದ್ದು ಹೊರತುಪಡಿಸಿ ಎಲ್ಲ ಗ್ರಾಪಂಗಳಿಗೂ ಬೆಳೆವಿಮೆ ಜಮಾ ಆಗಿದೆ. ಜಿಲ್ಲಾಧಿಕಾರಿ ನಿರ್ದೇಶನದಂತೆ ಪಾವತಿಯಾಗದ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಮತ್ತೊಮ್ಮೆ ಪರಿಶೀಲಿಸಿ, ಸೂಕ್ತ ದಾಖಲೆ ವಿಮಾ ಕಂಪನಿಗೆ ಸಲ್ಲಿಸಿ, ಆಗಿರುವ ಲೋಪದೋಷ ಸರಿ ಪಡಿಸಲಾಗುವುದು ಎಂದರು.
ಚಳ್ಳಕೆರೆಗೆ ಶೇ 51ರಷ್ಟು ಪರಿಹಾರ: ಜಿಲ್ಲೆಯ ರೈತರು ಬೆಳೆ ವಿಮೆ ಪಾವತಿಗೆ 11.92 ಕೋಟಿ ರೂ. ಹಣ ಪಾವತಿಸಿದ್ದು, ಒಟ್ಟು 284 ಕೋಟಿ ರೂ. ಬಂದಿದೆ. ಈ ಪೈಕಿ ಒಟ್ಟು ಮೊತ್ತದಲ್ಲಿ ಚಳ್ಳಕೆರೆ ತಾಲೂಕಿಗೆ ಶೇ 51ರಷ್ಟು ಪರಿಹಾರ ಹಣ ಬಂದಿದೆ ಎಂದು ಮಾಹಿತಿ ನೀಡಿದರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ, ಬೆಳೆವಿಮೆ ಪ್ರತಿನಿಧಿಗಳು, ರೈತಸಂಘದ ಮುಖಂಡರಾದ ರೆಡ್ಡಿಹಳ್ಳಿ ವೀರಣ್ಣ, ಕೆ.ಪಿ.ಭೂತಯ್ಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹಂಪಯ್ಯನಮಾಳಿಗೆ ಧನಂಜಯ, ಬ್ಯಾರಡಹಳ್ಳಿ ಶಿವಕುಮಾರ, ನಿವೃತ್ತ ಪ್ರಾಚಾರ್ಯ ಶಿವಲಿಂಗಪ್ಪ, ಮಲ್ಲಾಪುರ ತಿಪ್ಪೇಸ್ವಾಮಿ ಇತರರಿದ್ದರು.