

ಚಿತ್ರದುರ್ಗ: ಬೆಳೆವಿಮೆ,ಬೆಳೆನಷ್ಟ ಪರಿಹಾರ ವಿತರಿಸದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ರಾಜ್ಯರೈತ ಸಂಘದ ನೇ ತೃತ್ವದಲ್ಲಿ ರೈತರು ನಗರದ ವೀರ ವನಿತೆ ಒನಕೆ ಓಬವ್ವ ವೃತ್ತದ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.
ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು,ಕೂಡಲೇ ಪರಿಹಾರ ವಿತರಿಸುವಂತೆ ಒತ್ತಾಯಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‌ಬಾಬು ಮಾತನಾಡಿ ಚಿತ್ರದುರ್ಗ ಜಿಲ್ಲೆ ಮಳೆಯಾಶ್ರೀತ ಪ್ರದೇಶ. ಮಳೆಯನ್ನೇ ನಂಬಿ ಒಕ್ಕಲು ತನ ಮಾಡಬೇಕಿದೆ. ಹಿಂಗಾರು-ಮುಂಗಾರು ಕೈಕೊಟ್ಟಿದ್ದರಿಂದ ಬೆಳೆ ನಷ್ಟವಾಗಿ ರೈತರ ಬದುಕು ಮೂರಾ ಬಟ್ಟೆಯಾಗಿದೆ.
ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಬೆಳೆವಿಮೆ,ಬೆಳೆ ಪರಿಹಾರ ನೀಡದೆ ಸತಾಯಿಸುತ್ತಿವೆ ಎಂದು ಆ ಕ್ರೋಶ ವ್ಯಕ್ತ ಪಡಿಸಿದರು. ರಾಜ್ಯರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ,ಜಾನುವಾರುಗಳಿಗೆ ಮೇವು ಒದಗಿಸಲು ಸಾಧ್ಯ ವಾಗುತ್ತಿಲ್ಲ. ಯುಗಾದಿ ಹಬ್ಬ ಬರುತ್ತಿದೆ. ಆದ್ದರಿಂದ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಮುಖಂಡರಾದ ಧನಂಜಯ,ಹೊರಕೇರಪ್ಪ,ಚಿಕ್ಕಪ್ಪನಹಳ್ಳಿರುದ್ರಸ್ವಾಮಿ,ತಿಪ್ಪೇಸ್ವಾಮಿ,ಲಕ್ಷ್ಮಕ್ಕ,ನಿತ್ಯಶ್ರೀ, ಲಕ್ಷ್ಮಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.