

ಚಿತ್ರದುರ್ಗ: ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯ ಬೆಳೆ ವಿಮೆ ಕಂತು ಜು. 31ಕ್ಕೆ ಮುಕ್ತಾಯವಾಗಲಿದೆ. ಇದರಿಂದ ವಿಮೆ ಪಡೆಯುವ ರೈತರಿಗೆ ಅಪಾರ ನಷ್ಟವಾಗಲಿದೆ ಎಂದು ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೊಂಚೆ ಶಿವರುದ್ರಪ್ಪ ತಿಳಿಸಿದ್ದಾರೆ.
ಜಿಲ್ಲೆಗೆ ಜೂನ್‌ನ ಮುಂಗಾರು ಅವಧಿಯಲ್ಲಿ ಮಳೆ ಬಾರದೇ ಶೇ 16ರಷ್ಟು ಮಾತ್ರ ಬಿತ್ತನೆಯಾಗಿತ್ತು. ಈ ಕಾರಣಕ್ಕೆ ಬರ ಘೋಷಣೆಗೆ ಸರ್ಕಾರ ಮುಂದಾಗಿತ್ತು. ಆದರೆ, ಜುಲೈನಲ್ಲಿ ಆಗಿಂದಾಗ್ಗೆ ಮಳೆ ಸುರಿದಿದ್ದು, ರೈತರು ಈಗಷ್ಟೇ ಬಿತ್ತನೆಯತ್ತ ಒಲವು ತೋರುತ್ತಿದ್ದಾರೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಬಿತ್ತನೆ ಮಾಡದೆ ಬೆಳೆ ವಿಮೆ ಕಂತು ಕಟ್ಟಲು ಅವಕಾಶವಿಲ್ಲ. ಬಿತ್ತನೆ ನಂತರ ಜಿಪಿಎಸ್ ಫೋಟೋ ಸಹಿತ ವಿವರ ಸಲ್ಲಿಸಬೇಕಾಗಿದೆ. ಕೆಲವರು ಖಾತೆಯಲ್ಲಿ ಒಟ್ಟು ಕುಟುಂಬದ ಪಹಣಿ ಆಧಾರದಲ್ಲಿ ಕಂತು ಕಟ್ಟಲು ಹೋದರೆ, ಇನ್ನುಳಿದ ರೈತರಿಗೆ ಅನ್ಯಾಯವಾಗುತ್ತದೆ ಎಂದು ತಿಳಿಸಿದ್ದಾರೆ.
ನಿಗದಿಪಡಿಸಿರುವ ಕಾಲಾವಧಿ ಆ. 15ರವರೆಗೆ ನೀಡಿದ್ದಲ್ಲಿ ರೈತರಿಂದ ಶೇ 50ರಷ್ಟು ಬಿತ್ತನೆ ಆಗಲಿದ್ದು, ಅಲ್ಲಿಗೆ ಮುಂಗಾರು ಶೇ 65ರಷ್ಟು ಪೂರ್ಣಗೊಳ್ಳಲಿದೆ.
ಈ ಅವಧಿಯಲ್ಲಿ ವಿಮಾ ಕಂತು ಪಾವತಿಸಿದರೆ ರೈತರಿಗೂ ಅನುಕೂಲವಾಗಲಿದೆ. ಆದ್ದರಿಂದ ಜಿಲ್ಲಾಧಿಕಾರಿ ಅವರು ಈ ಕುರಿತು ಗಮನಹರಿಸಿ ಅವಧಿ ವಿಸ್ತರಿಸಬೇಕು ಎಂದು ಆರ್. ಹೇಮಂತ್‌ಕುಮಾರ್, ಬಿ.ಮಹಾದೇವಪ್ಪ, ತಿಪ್ಪೇಸ್ವಾಮಿ, ಜಯವಾಣಿ ಯಾದವ್ ಒತ್ತಾಯಿಸಿದ್ದಾರೆ.