ಬೆಳೆ, ಮನೆ ಹಾನಿ ವರದಿ ಕೂಡಲೇ ಸಲ್ಲಿಸಿ

28 HBD 1
ಹುಮನಾಬಾದ್ ತಾಲೂಕಿನ ಘಾಟಬೋರಾಳ ಗ್ರಾಮಕ್ಕೆ ಭಾನುವಾರ ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್ ಭೇಟಿ ನೀಡಿ ಮಳೆಯಿಂದ ಹಾನಿಯಾದ ಕುರಿತು ಪರಿಶೀಲಿಸಿದರು. ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಇತರರಿದ್ದರು.
Published on

ಹುಮನಾಬಾದ್: ಕಳೆದ ಕೆಲ ದಿನಗಳಿಂದ ನಿರಂತರ ಸುರಿಯುತ್ತಿರುವ ಧಾರಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡ ಹಿನ್ನೆಲೆ ತಾಲೂಕಿನ ನಾನಾ ಗ್ರಾಮಗಳಿಗೆ ಭಾನುವಾರ ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್ ಹಾಗೂ ಭೀಮರಾವ ಪಾಟೀಲ್ ಭೇಟಿ ನೀಡಿ ಬೆಳೆ ಹಾನಿ, ಇತರ ಸಮಸ್ಯೆ ಕುರಿತು ಪರಿಶೀಲನೆ ನಡೆಸಿದರು.

ತಾಲೂಕು ಮಟ್ಟದ ಅಧಿಕಾರಗಳ ತಂಡದೊಂದಿಗೆ ಧುಮ್ಮನಸೂರ, ಕನಕಟ್ಟಾ, ಘಾಟಬೋರಳ, ಸೇವಾ ನಗರ ತಾಂಡಾ, ಮಾಣಿಕ ನಗರ, ಹುಡಗಿ ರೈತರ ಹೊಲಗಳು ಸೇರಿ ವಿವಿಧ ಗ್ರಾಮಗಳ ಬೀದಿ, ಬೀದಿಗಳಲ್ಲಿ ಸುತ್ತಾಡಿ ಹಾನಿಗೀಡಾದ ಬೆಳೆ, ಮನೆ ವೀಕ್ಷಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.

ಡಾ.ಚಂದ್ರಶೇಖರ ಪಾಟೀಲ್ ಮಾತನಾಡಿ, ನಿರಂತರ ಸುರಿದ ಮಳೆಯ ನೀರು ಸಾರ್ವಜನಿಕರ ಮನೆಗಳಿಗೆ ನುಗ್ಗಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಜನರ ಜೀವನ ಅಸ್ತವ್ಯಸ್ತವಾಗಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಅಗತ್ಯ ಸೌಲಭ್ಯ ಕಲ್ಪಿಸಿಕೊಡಬೇಕು. ಬೆಳೆ, ಮನೆ ಹಾಗೂ ಜಾನುವಾರುಗಳ ಹಾನಿ ಕುರಿತು ವರದಿ ಸಲ್ಲಿಸಬೇಕು. ನಿರ್ಲಕ್ಷ್ಯಸಹಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಹುಡಗಿ ಗ್ರಾಮದಿಂದ ನಂದಗಾಂವ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ಬಿರುಕುಗಳು ಬಿಟ್ಟಿದ್ದು ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡು ಸೇತುವೆ ದುರಸ್ತಿ ಮಾಡಬೇಕು. ದುರಸ್ತಿ ಕಾರ್ಯ ಮುಗಿಯುವವರೆಗೆ ದೊಡ್ಡ ವಾಹನಗಳು ಹೋಗದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದರು.

ಎಂಎಲ್ ಸಿ ಭೀಮರಾವ ಪಾಟೀಲ್, ತಹಸೀಲ್ದಾರ್ ಅಂಜುಮ್ ತಬಸ್ಸುಮ್, ತಾಪಂ. ಇಒ ದೀಪಿಕಾ ನಾಯ್ಕರ್, ಸಹಾಯಕ ಕೃಷಿ ನಿರ್ದೇಶಕ ಶರಣಕುಮಾರ ಕಲ್ಯಾಣಿ, ಪಶು ಸಂಗೋಪನೆ ಸಹಾಯಕ ನಿರ್ದೇಶಕ ಡಾ. ಗೋವಿಂದ, ತೋಟಗಾರಿಕೆ ಸಹಾಯಕ ನಿರ್ದೇಶಕ ಲಿಂಗರಾಜ ಪಾಟೀಲ್, ಕಂದಾಯ ನಿರೀಕ್ಷಕ ರಾಹುಲದೇವ, ಪಿಡಿಒ ರಾಜಕುಮಾರ ಬುಳ್ಳಾ, ರಾಜಶೇಖರ ಬುಳ್ಳಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net