

ಹಿರೇಬಾಗೇವಾಡಿ, ಬೆಳಗಾವಿ
ಕಳೆದ ಹತ್ತು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆಗಳು ನಾಶವಾಗುತ್ತಿದ್ದು ಸಂಬಂಧಿತ ಇಲಾಖೆ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಹಿರೇಬಾಗೇವಾಡಿ ಮತ್ತು ಸುತ್ತಲಿನ ಗ್ರಾಮಗಳ ರೈತರು ಇಲ್ಲಿನ ಉಪತಹಸೀಲ್ದಾರ್ ಪಿ.ಆರ್. ಸಂತೋಷ ಮೂಲಕ ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದರು. ಹಿರೇಬಾಗೇವಾಡಿ ಮತ್ತು ಸುತ್ತಲಿನ ಹತ್ತಾರು ಗ್ರಾಮಗಳ ಹೊಲಗಳಲ್ಲಿ ಬೆಳೆದು ನಿಂತ ಸೋಯಾಬೀನ್, ಶೇಂಗಾ ಮತ್ತು ಗೋವಿನ ಜೋಳ ಮಳೆ ನೀರು ನಿಂತು ಹಾನಿಯಾಗಿದೆ. ಸಂಬಂಧಿತ ಅಧಿಕಾರಿಗಳು ಸಮೀಕ್ಷೆ ಮಾಡದೆ ರೈತರನ್ನು ಕಡೆಗಣಿಸಿದ್ದಾರೆ. ಆದ್ದರಿಂದ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿ ಬಗ್ಗೆ ಸರ್ಕಾರಕ್ಕೆ ವರದಿ ಒಪ್ಪಿಸಬೇಕು. ರೈತರಿಗೆ ಪರಿಹಾರ ಕೊಡಿಸುವಂತೆ ಆಗ್ರಹಿಸಿದ್ದಾರೆ. ಬಸಪ್ಪ ವಾಲಿ, ಸಿ.ಸಿ. ಪಾಟೀಲ, ಬಸವಣ್ಣೆಪ್ಪ ಗಾಣಗಿ, ಪಡಿಗೌಡ ಪಾಟೀಲ, ಪ್ರಕಾಶ ಜಪ್ತಿ, ರಾಜಶೇಖರ ಪಾಟೀಲ, ರಘು ಪಾಟೀಲ, ಮಲ್ಲನಗೌಡ ಪಾಟೀಲ, ಅಜ್ಜಪ್ಪ ವಾಲಿ, ರವಿ ಮೇಳೇದ ಇದ್ದರು.