

ಚಾಮರಾಜನಗರ: ತೋಟಗಾರಿಕೆ ಬೆಳೆಗಳಿಂದ ಲಾಭವಿರಲಿ ಬಂಡವಾಳವನ್ನಷ್ಟೇ ನಿರೀಕ್ಷೆ ಮಾಡಿದ್ದ ರೈತರಿಗೆ ಹಲವಾರು ದಿನಗಳಿಂದ ಸುರಿದ ಮಳೆ ಬೆಳೆಗಳು ನೆಲೆ ಕಚ್ಚುವಂತೆ ಮಾಡಿದೆ.
ಜಿಲ್ಲೆಯ ತೋಟಗಾರಿಕೆ ಇಲಾಖೆ ನೀಡಿದ ಮಾಹಿತಿಯ ಪ್ರಕಾರ 2025-26 ನೇ ಸಾಲಿನ ಏಪ್ರಿಲ್, ಮಾರ್ಚ್ ಮತ್ತು ಮೇ ತಿಂಗಳಲ್ಲಿ ಬಿದ್ದ ಮಳೆ ಮತ್ತು ಗಾಳಿಯಿಂದಾಗಿ ಚಾಮರಾಜನಗರ ತಾಲೂಕಿನ ವ್ಯಾಪ್ತಿಯಲ್ಲಿ 57 ರೈತರ ಸುಮಾರು 36.70 ಹೆಕ್ಟೇರ್ ಬಾಳೆ, 2 ರೈತರ 0.22 ಹೆಕ್ಟೇರ್ ಪ್ರದೇಶದ ತೆಂಗು ನಾಶವಾಗಿದೆ. ಗುಂಡ್ಲುಪೇಟೆ ತಾಲೂಕಿನ 178 ರೈತರ ಸುಮಾರು 86.46 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಮತ್ತು 2 ರೈತರ 0.40 ತೆಂಗು ನೆಲಕಚ್ಚಿದೆ. ಕೊಳ್ಳೇಗಾಲ ತಾಲೂಕಿನ 2 ರೈತರ 0.65 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಹಾಳಾಗಿದೆ. ಹನೂರು ತಾಲೂಕಿನ 20 ರೈತರ 6.06 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಹಾನಿಯಾಗಿದೆ. ಒಟ್ಟಾರೆಯಾಗಿ 257 ರೈತರ 129.87 ಹೆಕ್ಟೇರ್ ಪ್ರದೇಶದ ಬಾಳೆ ಹಾಗೂ 4 ರೈತರ 0.62 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ನಾಶವಾಗಿದೆ.
ಕೆಲವು ಗ್ರಾಮಗಳಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಹಾಗೂ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದಾಗಿ ಬಾಳೆ, ತೆಂಗು ಬೆಳೆಗಳ ಜೊತೆಗೆ ಇನ್ನಿತರೆ ತೋಟಗಾರಿಕೆ ಬೆಳೆಗಳು ಕೂಡ ನೆಲಕಚ್ಚಿದೆ. ಅದಲ್ಲದೇ ಹಲವಾರು ಮರ-ಗಿಡಗಳಿಗೂ ಕೂಡ ಹಾನಿಯಾಗಿದೆ. ಒಂದೆಡೆ ಪೂರ್ವ ಮುಂಗಾರು ಬಿತ್ತನೆಗೆ ನೆಲ ಹಲವಾಗಿದ್ದರೇ, ಮಳೆಯಿಂದಾಗಿ ಅಷ್ಟೇ ಪ್ರಮಾಣದಲ್ಲಿ ರೈತರ ಬೆಳೆಗಳು ನಾಶವಾಗಿದೆ. ಜಿಲ್ಲೆಯ ಯಳಂದೂರು ತಾಲೂಕನ್ನು ಹೊರತುಪಡಿಸಿ ನಾಲ್ಕೂ ತಾಲೂಕಿನಲ್ಲೂ ಅಪಾರ ಪ್ರಮಾಣದ ತೋಟಗಾರಿಕೆ ಬೆಳೆ ನಾಶವಾಗಿದ್ದು, ರೈತರು ಸಕಾಲದಲ್ಲಿ ಸೂಕ್ತ ಪರಿಹಾರವನ್ನು ನೀಡುವಂತೆ ಒತ್ತಾಯಿಸಿದ್ದಾರೆ.
ಟಮೊಟೊ, ಎಲೆಕೋಸಿಗೂ ಹಾನಿ:
ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ತೋಟಗಾರಿಕೆ ಬೆಳೆಗಳಾದ ಬಾಳೆ ಮತ್ತು ತೆಂಗು ಅಲ್ಲದೇ ಟಮೊಟೊ ಮತ್ತು ಎಲೆಕೋಸು ಕೂಡ ಹಾಳಾಗಿದೆ. ಚಾಮರಾಜನಗರ ತಾಲೂಕಿನ ವ್ಯಾಪ್ತಿಯ ತಲಾ ಒಬ್ಬರು ರೈತರ ಜಮೀನಿನಲ್ಲಿ 0.30 ಹೆಕ್ಟೇರ್ ಪ್ರದೇಶದಲ್ಲಿ ಟಮೊಟೊ ಮತ್ತು 0.40 ಹೆಕ್ಟೇರ್ ಪ್ರದೇಶದಲ್ಲಿ ಎಲೆಕೋಸಿಗೆ ಹಾನಿಯಾಗಿದೆ. ಸಮಗ್ರ ಬೇಸಾಯವನ್ನು ಅವಲಂಬಿಸಿರುವ ರೈತರ ಜಮೀನಿನಲ್ಲಿ ತೋಟಗಾರಿಕೆ ಬೆಳೆಗಳ ಜೊತೆಗೆ ಇನ್ನಿತರೆ ಕೃಷಿ ಬೆಳೆಗಳು ಕೂಡ ನಾಶವಾಗಿದೆ. ಲಾಭದ ನಿರೀಕ್ಷೆಯಲ್ಲಿ ತೋಟಗಾರಿಕೆ ಬೆಳೆ ಬೆಳೆದಿದ್ದ ರೈತರು, ಬಂಡವಾಳವೂ ಕೂಡ ಸಿಗದಷ್ಟು ನಷ್ಟವಾಗಿದೆ. ಬಾಳೆ, ತೆಂಗು, ಟಮೊಟೊ ಮತ್ತು ಎಲೆಕೋಸು ಬೆಳೆದಿದ್ದ ಒಟ್ಟು 263 ರೈತರ 131.09 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಮಳೆಯಿಂದಾಗಿ ಹಾನಿಗೊಳಗಾಗಿದೆ. ಕಳೆದ ವರ್ಷವೂ ಕೂಡ ಇದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ತೋಟಗಾರಿಕೆ ಬೆಳೆಗಳು ಮಳೆ-ಗಾಳಿಗೆ ಹಾನಿಯಾಗಿದ್ದವು.
ಗುಂಡ್ಲುಪೇಟೆಯಲ್ಲೇ ಹೆಚ್ಚು:
ಗುಂಡ್ಲುಪೇಟೆ ತಾಲೂಕಿನಲ್ಲಿ ಕೆಲವು ದಿನಗಳ ಹಿಂದೆ ಸುರಿದ ಗಾಳಿ ಸಹಿತ ಮಳೆಗೆ 180 ರೈತರ 86.86 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಮತ್ತು ತೆಂಗು ಬೆಳೆಗ ಹಾನಿಯಾಗಿದೆ. ತಾಲೂಕಿನ ಶೀಲವಂತಪುರ, ಸೋಮನಪುರ, ಕೊಡಸೋಗೆ, ಬೊಮ್ಮಲಾಪುರ, ಕಡತಾಳಕಟ್ಟೆಹುಂಡಿ, ಕುಂದಕೆರೆ, ವಡ್ಡಗೆರೆ ಮುಂತಾದ ಗ್ರಾಮಗಳಲ್ಲಿ ಜೋರಾಗಿ ಬೀಸಿದ ಗಾಳಿಗೆ ರೈತರ ಜಮೀನುಗಳಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬಾಳೆ ಗಿಡಗಳು ನೆಲಕಚ್ಚಿದ್ದವು. ಕೊಡಸೋಗೆ ಗ್ರಾಮದ ಎಲ್.ಮಹದೇವಸ್ವಾಮಿ, ಗುರು, ನಾಗಮಲ್ಲಪ್ಪ, ಕೊಂಗಳ್ಳಯ್ಯ, ಕೊಂಗಳ್ಳಶೆಟ್ಟಿ. ಸುಬ್ಬಪ್ಪ, ಪ್ರಕಾಶ್, ಕುಂದಕೆರೆ ಸ್ವಾಮಿ ಎಂಬುವರ ಜಮೀನುಗಳಲ್ಲಿ ಬೆಳೆದಿದ್ದ 30 ಸಾವಿರಕ್ಕೂ ಅಧಿಕ ಬಾಳೆ ನೆಲಕ್ಕುರುಳಿವೆ. ಕೆಲವೇ ದಿನಗಳಲ್ಲಿ ಕಟಾವಿಗೆ ಬರಲಿದ್ದ ಬಾಳೆ ನೆಲಕಚ್ಚಿದ ಪರಿಣಾಮ ಪ್ರತಿಯೊಬ್ಬ ರೈತರಿಗೂ ಲಕ್ಷಾಂತರ ರೂಪಾಯಿಗಳ ಬೆಳೆನಷ್ಟ ಉಂಟಾಗಿದೆ. ಗುಂಡ್ಲಪೇಟೆ ತಾಲೂಕಿನ ವ್ಯಾಪ್ತಿಯಲ್ಲೇ ಸುಮಾರು 14.78 ಲಕ್ಷ ರೂ, ಪರಿಹಾರವನ್ನು ನೀಡಬೇಕಾಗಿದೆ.
22.33 ಲಕ್ಷ ರೂ, ಪರಿಹಾರ:
ಜಿಲ್ಲೆಯಲ್ಲಿ ಬಿದ್ದ ಮಳೆ ಮತ್ತು ಗಾಳಿಯಿಂದ ಹಾನಿಗೊಳಗಾಗಿರುವ ತೋಟಗಾರಿಕೆ ಬೆಳೆಗಳಿಗೆ ಎನ್‌ಡಿಆರ್‌ಎ್ ಮಾರ್ಗಸೂಚಿ ಪ್ರಕಾರ ಪರಿಹಾರವನ್ನು ನೀಡಬಹುದಾಗಿದೆ. ಅದರಂತೆ ಚಾಮರಾಜನಗರ ತಾಲೂಕಿನಲ್ಲಿ 6.40 ಲಕ್ಷ ರೂ, ಪರಿಹಾರವನ್ನು ರೈತರಿಗೆ ನೀಡಬೇಕಾಗಿದೆ. ಗುಂಡ್ಲುಪೇಟೆಯಲ್ಲಿ 14.78 ಲಕ್ಷ ರೂ, ಪರಿಹಾರವನ್ನು ನೀಡಬೇಕಿದೆ. ಕೊಳ್ಳೇಗಾಲದಲ್ಲಿ 11 ಸಾವಿರ ರೂ, ಹಾಗೂ ಹನೂರಿನಲ್ಲಿ 1.03 ಲಕ್ಷ ರೂ, ಪರಿಹಾರವನ್ನು ನೀಡಬೇಕಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಹಾನಿಯಾಗಿರುವ 131.19 ಹೆಕ್ಟೇರ್ ಪ್ರದೇಶಕ್ಕೆ 22.33 ಲಕ್ಷ ರೂ, ಪರಿಹಾರವನ್ನು ನೀಡಬೇಕಾಗಿದೆ.
ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಬಾಳೆ ಬೆಳೆಗೆ ಹೆಚ್ಚು ಹಾನಿಯಾಗಿದೆ. ವರ್ಷದಲ್ಲಿ 2-3 ಬಾರಿ ರೈತರು ನಷ್ಟ ಅನುಭವಿಸುವಂತಾಗುತ್ತದೆ. ಈಗಾಗಲೇ ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಸಹಕಾರದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಹಾರದ ಪಟ್ಟಿಯನ್ನು ಪ್ರಕಟಣೆ ಮಾಡಲಾಗಿದೆ. ಶೀಘ್ರದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಬಳಿಕ ಆನ್‌ಲೈನ್ ಮೂಲಕ ದಾಖಲು ಮಾಡಿ ಪರಿಹಾರ ವಿತರಣೆ ಮಾಡಲಾಗುತ್ತದೆ.
-ಶಿವಪ್ರಸಾದ್, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ, ಚಾಮರಾಜನಗರ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಾಳೆಯನ್ನು ಬೆಳೆ ವಿಮೆ ವ್ಯಾಪ್ತಿಗೆ ತರಬೇಕು. ಹಿಂದಿನ ವರ್ಷದಲ್ಲೂ ಮೈಸೂರು-ಚಾಮರಾಜನಗರ ಭಾಗದಲ್ಲಿ ತೋಟಗಾರಿಕೆ ಬೆಳೆಗಳಿಗೆ ಮಳೆ-ಗಾಳಿಯಿಂದ ಹೆಚ್ಚು ಹಾನಿಯಾಗಿತ್ತು. ಬೆರಳೆಣಿಕೆ ರೈತರಿಗೆ ಮಾತ್ರ ಪರಿಹಾರ ದೊರೆತಿತ್ತು. ಸರ್ಕಾರ ಪರಿಹಾರ ನೀಡುವ ಮಾನದಂಡಗಳಲ್ಲಿ ಬದಲಾವಣೆ ಮಾಡಿಕೊಂಡು ಶೇ.75 ರಷ್ಟು ಪರಿಹಾರವನ್ನು ರೈತರಿಗೆ ನೀಡಬೇಕು.
-ಹಳ್ಳಿಕೆರೆಹುಂಡಿ ಭಾಗ್ಯರಾಜ್, ಅಧ್ಯಕ್ಷ, ಕರ್ನಾಟಕ ರಾಜ್ಯ ಕಬ್ಬುಬೆಳೆಗಾರರ ಸಂಘ, ಚಾಮರಾಜನಗರ