ಬೆಳೆ ನಾಶ ಪರಿಹಾರಕ್ಕಾಗಿ ಪ್ರತಿಭಟನೆ

Raithasangha
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಈರುಳ್ಳಿ ಸೇರಿ ಇನ್ನಿತರೆ ತೋಟಗಾರಿಕೆ ಬೆಳೆಗಳು ನಾಶವಾಗಿದ್ದು, ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಡಿ.ಎಸ್.ಹಳ್ಳಿ, ಜೋಡಿ ಚಿಕ್ಕೇನಹಳ್ಳಿ, ತೋಪುರಮಾಳಿಗೆ, ದ್ಯಾಮವ್ವನಹಳ್ಳಿ, ಕಾಸವರಹಟ್ಟಿ, ದಂಡಿನ ಕುರುಬರಹಟ್ಟಿ, ನರೇನಾಳ್, ಜೆ.ಎನ್.ಕೋಟೆ, ಎಣ್ಣೆಗೆರೆ ಇನ್ನಿತರೆ ಗ್ರಾಮಗಳಲ್ಲಿ ಈರುಳ್ಳಿ ಬೆಳೆ ಹಾನಿ ಉಂಟಾಗಿರುವುದನ್ನು ಪ್ರದರ್ಶಿಸಿದರು. ಸೂಕ್ತ ಪರಿಹಾರಕ್ಕೆ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಕಳೆದ ವರ್ಷದ ಬರಗಾಲವನ್ನೆ ರೈತರು ಇನ್ನು ಸುಧಾರಿಸಿಕೊಳ್ಳದೆ ಸಾಲಗಾರರಾಗಿದ್ದಾರೆ. ಆರಂಭದಲ್ಲಿ ಉತ್ತಮ ಮಳೆಯಾಯಿತಾದರೂ ಕಳೆದ 20 ದಿನಗಳಿಂದ ಸುರಿದ ಮಳೆಗೆ ಈರುಳ್ಳಿ, ಇನ್ನಿತರೆ ತೋಟಗಾರಿಕೆ ಬೆಳೆಗಳು ಕೊಳೆತು ನಾಶವಾಗಿವೆ ಎಂದು ಅಳಲು ತೋಡಿಕೊಂಡರು.

ಕೃಷಿಗಾಗಿ ಸಾಲ ಮಾಡಿದ್ದು, ಹಾಕಿದ ಬಂಡವಾಳವೂ ಕೈಗೆ ಸಿಗದೆ ರೈತರು ಕಂಗಾಲಾಗಿದ್ದಾರೆ. ತ್ವರಿತವಾಗಿ ಬೆಳೆ ಸಮೀಕ್ಷೆ ನಡೆಸಿ, ವಿಮೆಗೆ ಒಳಪಟ್ಟವರಿಗೆ ತಡ ಮಾಡದೆಯೇ ಬೆಳೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ತಾಲೂಕಿನ ಖುಷ್ಕಿ ಜಮೀನುಗಳಲ್ಲಿ ಹೆಚ್ಚಾಗಿ ಸೂರ್ಯಕಾಂತಿ ಬೆಳೆಯುತ್ತಿದ್ದು, ಕೇಂದ್ರ ತೆರೆದು ಬೆಂಬಲ ಬೆಲೆಗೆ ಖರೀದಿಸಬೇಕು ಎಂದು ಕೋರಿದರು.

ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಮುಖಂಡರಾದ ಬಿ.ಇ.ಮಂಜುನಾಥ, ರಾಮರೆಡ್ಡಿ, ಮಹಂತೇಶ್ ರೆಡ್ಡಿ, ರಾಜಶೇಖರ್, ಪರಶಿವಣ್ಣ, ಪ್ರವೀಣ, ಮಾರುತಿ, ಸದಾಶಿವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net