ಬೆಳೆ ನಷ್ಟದ ಪರಿಹಾರ ಬಿಡುಗಡೆ ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ

ಬೆಳೆ ನಷ್ಟದ ಪರಿಹಾರ ಬಿಡುಗಡೆ ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ
Published on

ಹಾಸನ: ತುಂಡು ಭೂಮಿಗಾಗಿ ಮತ್ತು ಬೆಳೆ ನಷ್ಟದ ಪರಿಹಾರವನ್ನು ಶೀಘ್ರ ಬಿಡುಗಡೆ ಮಾಡುವಂತೆ ಆಗ್ರಹಿಸಿ ಸರಕಾರದ ವಿರುದ್ಧ ರಾಜ್ಯ ರೈತ ಸಂಘದವರು ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಹೇಮಾವತಿ ಪ್ರತಿಮೆ ಬಳಿಯಿಂದ ಎನ್.ಆರ್.ವೃತ್ತದ ಮೂಲಕ ಡಿಸಿ ವರೆಗೆ ಮೆರವಣಿಗೆಯಲ್ಲಿ ಬಂದು ಕೆಲ ಹೊತ್ತು ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಇದು ರಾಜಕೀಯ ಸಭೆಯಲ್ಲ. ರೈತರ ಬದುಕಿನ ಸಂಕಷ್ಟಗಳನ್ನು ಸರಕಾರಕ್ಕೆ ತಿಳಿಸಲು
ಹೋರಾಟಕ್ಕೆ ಇಳಿದಿದ್ದೇವೆ. ಮಲೆನಾಡಿನಲ್ಲ್ಲಿ ಅತಿ ಹೆಚ್ಚು ಮಳೆಗೆ ಕಾಫಿ ಸೇರಿದಂತೆ ಹಲವು ಬೆಳೆ ಹಾಳಾಗಿ, ರೈತರಿಗೆ ನಷ್ಟವಾಗಿದೆ ಎಂದರು.
ತೆಂಗು, ವಿವಿಧ ಬೆಳೆ ಮತ್ತು ಭೂಮಿ ಉಳಿವು ಸೇರಿದಂತೆ ರೈತರ ಹಲವು ಬೇಡಿಕೆ ಇವೆ. ತೋಟಗಾರಿಕೆ, ವಾಣಿಜ್ಯ ಬೆಳೆ ಸಂಪೂರ್ಣ ನಾಶವಾಗಿವೆ.
ಹಳೆಯ ವಾಸದ ಮನೆಗಳು ಬಿದ್ದು ಹೋಗಿವೆ. ಆಲೂರು-ಸಕಲೇಶಪುರ ತಾಲೂಕಿನಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಅರಸೀಕೆರೆ ತಾಲೂಕಿನಲ್ಲಿ ಹೆಚ್ಚು ತೆಂಗು ನೆಚ್ಚಿಕೊಂಡಿದ್ದ ರೈತರು ಕೊಬ್ಬರಿ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಕೂಡಲೇ 25 ಸಾವಿರ ಬೆಲೆ ನಿಗದಿ ಮಾಡಬೇಕು. ಚನ್ನರಾಯಪಟ್ಟಣ, ಕಾಚೇನಹಳ್ಳಿ ಏತ ನೀರಾವರಿಯಿಂದ ಕೆರೆಗಳಿಗೆ ತಕ್ಷಣವೇ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಹೊಳೆನರಸೀಪುರ ತಾಲ್ಲೂಕು ಶ್ರೀ ಮಠ ಗ್ರಾಮದ ಸರ್ವೆ ನಂ. 1 ಮತ್ತು ಚೌಡಳ್ಳಿ ಗ್ರಾಮದ ಸರ್ವೆ ನಂ. 70, 71, 74, ಗಾಳಿಪುರ ಗ್ರಾಮದ ಸರ್ವೆ ನಂ.1 ರಲ್ಲಿ ನೂರಾರು ರೈತರಿಗೆ ಹಲವು ವರ್ಷಗಳ ಹಿಂದೆಯೇ ಭೂಮಿ ಮಂಜೂರು ಮಾಡಿದ್ದು, ಅದರಂತೆ ರೈತರು ಸ್ವಾಧೀನದಲ್ಲಿದ್ದಾರೆ.ಹಿಂದೆ ಅರಣ್ಯ ಇಲಾಖೆಯವರು ವಿವಿಧ ಸಸಿ ನೀಡಿ, ಮರ ಬೆಳೆಸಿ ನೀವೇ ಕಟಾವು ಮಾಡಿಕೊಳ್ಳಿ ಎಂದಿದ್ದರು. ಇದೀಗ ದೊಡ್ಡವಾದ ನಂತರ ತಗಾದೆ ತೆಗೆದು ಮರಗಳು ಹಾಗೂ ಜಾಗ ನಮಗೆ ಸೇರಿದ್ದು ಎಂದು ಹೇಳಿದ್ದಾರೆ. ಈ ಭೂಮಿಯನ್ನು ರೈತರಿಗೇ ಉಳಿಸಿಕೊಡಬೇಕು ಎಂದು ಮನವಿ ಮಾಡಿದರು.
ಅರಸೀಕೆರೆ ತಾಲೂಕು, ಜಾವಗಲ್ ಹೋಬಳಿ, ಹಂದ್ರಾಳು ಲಿಂಗಾಪುರ, ನೀಲಗಿರಿ ಕಾವಲಿನ 4480 ಎಕರೆಯಲ್ಲಿ ಕಾಳಯ್ಯನಕೊಪ್ಪಲು, ಕೆರೆ ಕೋಡಿಹಳ್ಳಿ, ನಲ್ಲಲಿಗೆ, ಕೋಳಗುಂದ, ತಿರುಪತಿಹಳ್ಳಿ, ಮಾವತನಹಳ್ಳಿ, ಬೋವಿ ಕಾವಲು, ಸಿದ್ಧರಹಟ್ಟಿ, ತಿಮ್ಮನಹಳ್ಳಿ ಸೇರಿ 25 ಹಳ್ಳಿಗಳ ರೈತರು 80 ವರ್ಷದಿಂದ ಸ್ವಾಧೀನದಲ್ಲಿದ್ದಾರೆ. ಅವರಿಗೂ ತೊಂದರೆ ನೀಡುತ್ತಿದ್ದು ಅದನ್ನೂ ತಪ್ಪಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಇಷ್ಟೆಲ್ಲಾ ಸಮಸ್ಯೆ ಜೊತೆಗೆ ಅತಿವೃಷ್ಟಿ, ಅನಾವೃಷ್ಟಿಯಿಂದ ನಷ್ಟವಾಗಿದ್ದರೂ, ಬೆಳೆ ಸಾಲಕ್ಕಾಗಿ ಬ್ಯಾಂಕ್‌ನವರು ನೋಟಿಸ್ ನೀಡಿ ಕಿರುಕುಳ ನೀಡುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು ಹಾಗೆಯೇ ಆಲೂಗೆಡ್ಡೆ, ಶುಂಠಿ, ಮೆಕ್ಕೆ ಜೋಳ, ಕಾಫಿ, ಮೆಣಸು, ತರಕಾರಿ ಬೆಳೆಗಳಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಆನೆಕೆರೆ ರವಿ, ಜಿಲ್ಲಾಧ್ಯಕ್ಷ ಬಾಬು, ರಾಜ್ಯ ಸಂಚಾಲಕ ಮಹಮದ್ ಸಾದಿಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಂ, ಶಿವರಾಮೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net