

ಚಿತ್ರದುರ್ಗ: ಅಧಿಕ ಮಳೆಯಿಂದ ಚಳ್ಳಕೆರೆ, ಮೊಳಕಾಲ್ಮೂರು ಹಾಗೂ ಹಿರಿಯೂರು ತಾಲೂಕುಗಳಲ್ಲಿ ಶೇಂಗಾ, ಈರುಳ್ಳಿ ಮತ್ತಿತರ ಬೆಳೆಗಳು ನಾಶ ವಾಗಿದ್ದು, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘದ ಕಾರ‌್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ಚಿತ್ರದುರ್ಗ ಜಿಲ್ಲೆ ಕಳೆದ 17ವರ್ಷಗಳಿಂದ ಅನಾವೃಷ್ಟಿ ಮತ್ತು ಅತಿವೃ ಷ್ಟಿಗೆ ತುತ್ತಾಗಿ, ಪ್ರಕೃತಿ ವೈಫಲ್ಯದಿಂದ ಬೆಳೆಗಳು ನಾಶವಾಗಿ ರೈತರಿಗೆ ನಷ್ಟವಾಗುತ್ತಿದೆ. ಕೃಷಿ ವೆಚ್ಚದಿಂದ ರೈತರು ಸಾಲಗಾರರಾಗುವಂತಾಗಿದೆ ಎಂದರು.
ಕಳೆದ ವರ್ಷ ಅನಾವೃಷ್ಟಿಯಿಂದ ಬೆಳೆಗಳು ಒಣಗಿ ಹೋಗಿದ್ದರೆ, ಅತಿವೃಷ್ಟಿಯಿಂದ ಈ ವರ್ಷ ಬೆಳೆಗಳು ಕೊಳೆಯುತ್ತಿವೆ. ಸಾಲ ಪಾವತಿಸುವಂತೆ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ನವೆಂಬರ್ ಮೊದಲ ವಾರದಲ್ಲೇ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಖುದ್ದು ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಬೆಳೆ ನಷ್ಟ ಪರಿಹಾರ ಮತ್ತು ರೈತರಿಗೆ ಬೆಳೆ ವಿಮೆ ಪರಿಹಾರ ಕೊಡಿಸಬೇಕು. ಸಾಲ ಮರುಪಾವತಿಗೆ ರೈತರನ್ನು ಒತ್ತಾಯಿಸಬಾರದು. ವಸೂಲಿಗೆ ಬಾರದಂತೆ ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸುವಂತೆ ಪ್ರತಿಭಟನಾನಿರತರು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು. ಸಂಘದ ಜಿಲ್ಲಾಧ್ಯಕ್ಷ ಧನಂಜಯ, ಹಂಪಣ್ಣ, ತಿಮ್ಮಣ್ಣ, ಕುಮಾರಸ್ವಾಮಿ, ರಾಜಣ್ಣ, ರಾಮಚಂದ್ರಪ್ಪ, ರುದ್ರಪ್ಪ, ಶ್ರೀನಿವಾಸ್ ಇತರರು ಇದ್ದರು.
---