

ಹಾಸನ: ಜನನ, ಮರಣ ಹಾಗೂ ಕೃಷಿ ಅಂಕಿ ಅಂಶಗಳ ದಾಖಲೆ ಮತ್ತು ಬೆಳೆ ಕಟಾವು ನೋಂದಣಿಯಲ್ಲಿ ಯಾವುದೇ ಲೋಪ ಉಂಟಾಗದಂತೆ ನಿಗಾ ವಹಿಸಲು ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಮ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜನನ ಮರಣ ನೋಂದಣಿ ಪ್ರಗತಿ, ಕೃಷಿ ಅಂಕಿ ಅಂಶಗಳ ಸುಧಾರಣೆ, ಬೆಳೆ ಕಟಾವು ಪ್ರಯೋಗ ಮತ್ತು ಕೃಷಿ ಗಣತಿ ಕುರಿತ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ಜನನ ಮರಣ ನೋಂದಣಿ ನಿರಂತರ ಪ್ರಕ್ರಿಯೆ. ಇದೊಂದು ಮಹತ್ವದ ಕಾರ್ಯ, ಹಾಗಾಗಿ ಜವಾಬ್ದಾರಿ ಅರಿತು ಕೆಲಸ ಮಾಡಿ ಶೇಕಡ 100 ರಷ್ಟು ಪ್ರಗತಿ ಸಾಧಿಸಬೇಕು ಎಂದರು.
ಪ್ರತಿ ತಿಂಗಳು ಸಭೆ ನಡೆಸಿ ಜನನ ಮರಣ ದಾಖಲೆಗಳನ್ನು ಪಡೆದು ಸುರಕ್ಷಿತವಾಗಿರಿಸಬೇಕು. ಇ-ಜನ್ಮ ಆನ್‌ಲೈನ್ ನೋಂದಣಿ ಬಗ್ಗೆ ನಿರಂತರವಾಗಿ ನಿಗಾ ವಹಿಸಬೇಕು. ಇದೇ ರೀತಿ ಬೆಳೆ ನೋಂದಣಿ, ಕೃಷಿ ಗಣತಿ, ಬೆಳೆ ಅಂದಾಜು ಸಮೀಕ್ಷೆ, ಬೆಳೆಕ್ಷೇತ್ರ ಮರು ನೋಂದಣಿ ಬಗ್ಗೆಯೂ ವಿಶೇಷ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಸಾಂಖ್ಯಿಕ ಇಲಾಖೆ, ಕೃಷಿ ಕಂದಾಯ ಇಲಾಖೆ ನಡುವೆ ಸಮನ್ವಯ ಅಗತ್ಯ. ಬೆಳೆ ಸಮೀಕ್ಷೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು ವಿಳಂಬ ಮಾಡದೆ ಕಾಲಮಿತಿಯೊಳಗೆ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಬೆಳೆ ಕಟಾವು ಪ್ರಯೋಗಗಳನ್ನು ಮೊಬೈಲ್ ಆ್ಯಪ್ ಬಳಸಿ ಸರಿಯಾಗಿ ಅಪ್ಲೋಡ್ ಮಾಡಬೇಕು. ಕಂದಾಯ ಪರಿವೀಕ್ಷಕರಿಗೆ ತಹಸೀಲ್ದಾರರು ಸೂಕ್ತ ನಿರ್ದೇಶನ ನೀಡಿ ಪ್ರಗತಿ ವರದಿ ಪರಿಶೀಲನೆ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸತೀಶ್ ಕುಮಾರ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಲ್.ಬಿ. ರಾಜಾನಾಯ್ಕ, ಸಾಂಖ್ಯಿಕ ಇಲಾಖೆ ಸಹಾಯಕ ನಿರ್ದೇಶಕ ಕೆ.ಎಂ. ರೋಹಿತ್, ಸಹಾಯಕ ಸಂಖ್ಯಾ ಸಂಗ್ರಹಣಾಧಿಕಾರಿ ಎಚ್.ಎಂ. ಉಮಾಶಂಕರ್, ವಿವಿಧ ತಾಲೂಕು ತಹಸೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಪೌರಯುಕ್ತರು, ಮುನಿಸಿಫಲ್ ತಹಸೀಲ್ದಾರ್ ಸಭೆಯಲ್ಲಿ ಭಾಗವಹಿಸಿದ್ದರು.