

ಚಿತ್ರದುರ್ಗ:ಬೆಳೆ ಕಟಾವು ಪ್ರಯೋಗ ಆಧರಿಸಿ, ಬೆಳೆ ವಿಮೆ ಕಂಪನಿಗಳು ವಿಮೆ ಮೊತ್ತವನ್ನು ನಿರ್ಧರಿಸುತ್ತವೆ. ಆದ್ದರಿಂದ ಸರಿಯಾದ ಸಮಯಕ್ಕೆ ಕಟಾವು ಪ್ರಯೋಗ ಮಾಡದೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ಎಚ್ಚರಿಸಿದರು.
ಡಿಸಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ 11ನೇ ಕೃಷಿ ಗಣತಿ, ಪ್ರಸಕ್ತ ಸಾಲಿನ ಕೃಷಿ ಅಂಕಿ-ಅಂಶಗಳ ಮೊದಲ ತ್ರೈಮಾಸಿಕ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.
ಸಿಸಿಐ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಬೆಳೆ ಕಟಾವು ಪ್ರಯೋಗ ನಡೆಸಬೇಕು. ಅಧಿಕಾರಿ, ನೌಕರರು ಖುದ್ದು ಜಮೀನಿಗೆ ತೆರಳಬೇಕು. ಫೋಟೋ ತೆಗೆಯುವಾಗ ತೂಕದ ಯಂತ್ರ ಹಾಗೂ ಉತ್ಪನ್ನ ಸರಿಯಾಗಿ ಕಾಣುವಂತೆ ಇರಬೇಕು. ಇಲ್ಲವಾದಲ್ಲಿ ಕಟಾವು ಪ್ರಯೋಗ ಅನೂರ್ಜಿತವಾಗಲಿದೆ. ಉತ್ಪನ್ನ, ಉಪ ಉತ್ಪನ್ನಗಳ ವಿವರ ಭರ್ತಿ ಮಾಡಬೇಕು. ಕಟಾವು ಪ್ರಯೋಗದಲ್ಲಿ ತಪ್ಪಾದರೆ ತಪ್ಪಿತಸ್ಥರ ವೇತನದಲ್ಲಿ ಕಡಿತಗೊಳಿಸಿ ರೈತರಿಗೆ ನಷ್ಟ ಪರಿಹಾರ ತುಂಬಿಕೊಡಲಾಗುವುದು ಎಂದರು.
ಎಲ್ಲರೂ ನಿಗದಿತ ಅವಧಿಯೊಳಗೆ ತಮ್ಮ ಹೊಣೆಗಾರಿಕೆ ಪೂರ್ಣಗೊಳಿಸಬೇಕು. ಬೆಳ ಕಟಾವು ಪ್ರಯೋಗ ಪಾರದರ್ಶಕವಾಗಿರಲು ರೈತರು, ವಿಮಾ ಕಂಪನಿ ಅಧಿಕಾರಿಗಳು, ಮೇಲ್ವಿಚಾರಕರು ಕಡ್ಡಾಯವಾಗಿ ಹಾಜರಿರಬೇಕು. ಬೆಳೆ ಸಮೀಕ್ಷೆ ದತ್ತಾಂಶದ ಶೇ.1ಪರಿಶೀಲನೆಯ ಆ್ಯಪ್ ಬಿಡುಗಡೆಯಾದ ತಕ್ಷಣವೇ ನಿಯೋಜಿಸಿದ ಪ್ಲಾಟ್‌ಗಳಲ್ಲಿ ನಡೆಸಬೇಕು. ನಿರ್ಲಕ್ಷ್ಯ ತೋರುವವರನ್ನು ಸೇವೆಯಿಂದ ಅಮಾನತು ಮಾಡಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಅಂಕೆ ಸಂಖ್ಯೆ ಸಂಗ್ರಹಣಾಧಿಕಾರಿ ಎನ್.ರವಿಕುಮಾರ್ ಮಾತನಾಡಿ, 2023-24ನೇ ಸಾಲಿನ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಹಂತದಲ್ಲಿ ಹಲವು ಬೆಳೆ ಕಟಾವು ಪ್ರಯೋಗಗಳು ಅನೂರ್ಜಿತವಾಗಿವೆ. ಇದಕ್ಕಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ಕೊಡಲಾಗಿದೆ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ, ಉಪನಿರ್ದೇಶಕರಾದ ಪ್ರಭಾಕರ್, ಶಿವಕುಮಾರ್, ಸಹಾಯಕ ಅಂಕೆ ಸಂಖ್ಯೆ ಸಂಗ್ರಹಣಾಧಿಕಾರಿಗಳಾದ ಅಶ್ವತ್ಥಾಮ, ವೀಣಾ, ಚಂದ್ರಪ್ಪ, ಸಹಾಯಕ ನಿರ್ದೇಶಕರಾದ ಶಶಿರೇಖಾ, ಯಾಸಿನ್ ಇತರರು ಇದ್ದರು.
*ವರದಿಗೆ ಎಡಿಸಿ ಆಕ್ಷೇಪ
ಸಭೆಯಲ್ಲಿ 2021-22ನೇ ಸಾಲಿನ 11ನೇ ಕೃಷಿ ಗಣತಿ ವರದಿ ಕುರಿತು ಚರ್ಚಿಸಲಾಯಿತು. 2015-16ನೇ ಸಾಲಿನ 10ನೇ ಕೃಷಿ ಗಣತಿ ಅನುಸಾರ ಜಿಲ್ಲೆಯಲ್ಲಿ 3,01,539 ವೈಯಕ್ತಿಕ ಹಿಡುವಳಿದಾರರು ಇದ್ದಾರೆ. 5,48,344 ಹೆಕ್ಟೇರ್ ಸಾಗುವಳಿ ಭೂಮಿ ಇತ್ತು. 11ನೇ ಕೃಷಿ ಗಣತಿಯಲ್ಲಿ 3,66,453 ವೈಯಕ್ತಿಕ ಹಿಡುವಳಿದಾರರು ಹಾಗೂ 5,75,498 ಹೆಕ್ಟೇರ್ ಸಾಗುವಳಿ ಭೂಮಿ ಇದೆ ಎಂದು ಸಭೆಯಲ್ಲಿ ಮಂಡಿಸಿದ ವರದಿಗೆ ಆಕ್ಷೇಪ ವ್ಯಕ್ತಪಡಿಸಿದ ಎಡಿಸಿ ಕುಮಾರಸ್ವಾಮಿ, ತಹಸೀಲ್ದಾರ್‌ಗಳಿಂದ ಮತ್ತೊಮ್ಮೆ ಮಾಹಿತಿ ಪಡೆದು ಕೃಷಿ ಗಣತಿ ವರದಿ ಮಂಡಿಸುವಂತೆ ಸೂಚಿಸಿದರು.