

ಮೈಸೂರು: ನಗರದ ಹೊರವಲಯದ ಬೆಳವಾಡಿ ಬಳಿ 50 ಕೋಟಿ ರೂ. ವೆಚ್ಚದಲ್ಲಿ ಜವಳಿ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಕೈಮಗ್ಗ ಮತ್ತು ಜವಳಿ ಸಚಿವ ಶಂಕರ ಬಿ.ಪಾಟೀಲ ಮುನೇನಕೊಪ್ಪ ತಿಳಿಸಿದರು.
ನಗರದಲ್ಲಿ ಆಯೋಜಿಸಿರುವ ದಸರಾ ವಸ್ತುಪ್ರದರ್ಶನದಲ್ಲಿ ಗುರುವಾರ ಕೈಮಗ್ಗ ಮತ್ತು ಜವಳಿ ಮಳಿಗೆ ಉದ್ಘಾಟಿಸಿ ಮಾತನಾಡಿದರು.
ಜವಳಿ ನೀತಿ ಆಧಾರಿಸಿ ಮೈಸೂರಿನಲ್ಲಿ ಜವಳಿ ಪಾರ್ಕ್ ನಿರ್ಮಿಸಲಾಗುತ್ತಿದೆ. ನಿರ್ಮಾಣಕ್ಕೆ ಇದ್ದ ಕಾನೂನಿನ ತೊಡಕುಗಳನ್ನು ಪರಿಹರಿಸಲಾಗಿದೆ. ಪಾರ್ಕ್‌ಗೆ 10 ಎಕರೆ ಜಾಗದ ಅವಶ್ಯಕತೆ ಇತ್ತು. ಆದರೆ, 7 ಎಕರೆ ಮಂಜೂರಾಗಿದೆ. ಹೆಚ್ಚಿನ ಜಾಗ ಕೇಳಿದರೆ ಮತ್ತೆ ತಡವಾಗುತ್ತದೆ. ಕೇಂದ್ರ ಸರ್ಕಾರ ಅನುದಾನ ನೀಡಲು ಸಿದ್ಧ ಇದೆ. ಮುಂದಿನ ಜನವರಿ ಅಥವಾ ಫೆಬ್ರವರಿಯಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಇದರಿಂದ 500 ಜನರಿಗೆ ಉದ್ಯೋಗ ಸಿಗಲಿದೆ ಎಂದರು
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ತರಲು ಪ್ರಯತ್ನಿಸಲಾಗುತ್ತಿದೆ. ರಾಜ್ಯದ 5 ಜಿಲ್ಲೆಗಳಲ್ಲಿ ಜವಳಿ ಪಾರ್ಕ್ ನಿರ್ಮಾಣ ಮಾಡಲಾಗುವುದು. ಇನ್ನೂ ಹಲವು ಜಿಲ್ಲೆಗಳೂ ಬೇಡಿಕೆ ಸಲ್ಲಿಸಿದ್ದು, ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕೋವಿಡ್ ಕಾರಣಕ್ಕೆ 2 ವರ್ಷಗಳಿಂದ ವಸ್ತುಪ್ರದರ್ಶನ ಆಯೋಜಿಸಲು ಆಗಿರಲಿಲ್ಲ. ಈ ಬಾರಿ ಬೆಂಗಳೂರು ಸೇರಿದಂತೆ ಹಲವೆಡೆ ಜವಳಿ ಮೇಳ ಆಯೋಜಿಸಲಾಗುವುದು. ನೇಕಾರರನ್ನು ಉಳಿಸಿ, ಬೆಳೆಸುವುದರ ಜತೆಗೆ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು ಎಂದರು.
ನೇಕಾರರ ಹಳೇ ಪರಂಪರೆ ಉಳಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ಕೃಷಿಕರಿಗೆ ನೀಡುವಂತೆ ನೇಕಾರ ಸಮ್ಮಾನ ಯೋಜನೆಯಡಿ ಸಹಾಯಧನ ನೀಡಲಾಗುವುದು. ನೇಕಾರರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಜತೆಗೆ ಪರಿಶಿಷ್ಟ ಜಾತಿ, ಪಂಗಡದ ನೇಕಾರರಿಗೆ ಸಬ್ಸಿಡಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸಮೂರ್ತಿ, ಸಹಾಯಕ ನಿರ್ದೇಶಕ ಲಕ್ಷ್ಮಣ್ ತಳವಾರ್, ಜಂಟಿ ನಿರ್ದೇಶಕ ರವಿಕುಮಾರ್ ಇದ್ದರು.