ಬೆಳಗ್ಗೆ 6ರಿಂದ 11ರವರೆಗೆ ಅಂಗಡಿ ಒಪನ್

bidar lockdown2
Published on

ಬಸವಕಲ್ಯಾಣ: ಕರೊನಾ ನಿಯಂತ್ರಣಕ್ಕಾಗಿ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ಜಾರಿಗೊಳಿಸಲಾದ ಲಾಕ್ಡೌನ್ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಬಿಕೆಡಿಬಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಮುಖರ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದಲ್ಲಿನ ಕಿರಾಣಾ, ತರಕಾರಿ, ಹಣ್ಣು ಸೇರಿ ಅಗತ್ಯ ವಸ್ತುಗಳ ಅಂಗಡಿಗಳನ್ನು ಬೆಳಗ್ಗೆ 6ರಿಂದ 11ರ ವರೆಗೆ ಮಾತ್ರ ತೆರದಿಡಲು ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು. ಸಭೆ ಅಧ್ಯಕ್ಷತೆ ವಹಿಸಿದ ತಹಸೀಲ್ದಾರ್ ಸಾವಿತ್ರಿ ಸಲಗರ್ ಮಾತನಾಡಿ, ಕರೊನಾ ನಿಯಂತ್ರಣಕ್ಕೆ ಸರ್ಕಾರಕ್ಕೆ ಸಾರ್ವಜನಿಕರ ಸಹಕಾರ ಅವಶ್ಯ. ಕರೊನಾ ನಿಯಂತ್ರಣಕ್ಕಾಗಿ ಸರ್ಕಾರದಿಂದ ಒಂದು ವಾರದ ಲಾಕ್ಡೌನ್ ಜಾರಿಗೊಳಿಸಿದ್ದು, ಈ ವೇಳೆ ಸಾರ್ವಜನಿಕರು ಅನವಶ್ಯಕವಾಗಿ ಮನೆ ಬಿಟ್ಟು ಹೊರಗೆ ಬರಬಾರದು ಎಂದರು.
ಸಿಪಿಐ ನ್ಯಾಮಗೌಡರ ಮಾತನಾಡಿ, ಲಾಕ್ಡೌನ್ ನಿಯಮ ಪಾಲಿಸುವ ಜತೆಗೆ ಕರೊನಾ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಮಾಸ್ಕ ಧರಿಸುವುದು, ಪರಸ್ಪರ ಅಂತರ ಕಾಪಾಡುವುದು ಸೇರಿ ಇತರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜ್ವರ, ಶೀತ, ಉಸಿರಾಟದ ತೊಂದರೆ ಸೇರಿ ಇತರ ಲಕ್ಷಣ ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆಗೆ ಒಳಗಾಗಬೇಕು ಎಂದು ತಿಳಿಸಿದರು. ನಗರ ಠಾಣೆ ಪಿಎಸ್ಐ ಸುನಿಲಕುಮಾರ ಮಾತನಾಡಿ, ಲಾಕ್ಡೌನ್ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net