

ಆಲ್ದೂರು: ಪಟ್ಟಣ ಸಮೀಪದ ಬೆಳಗೋಡು ಎಸ್ಟೇಟ್‌ನಲ್ಲಿ ಕಾಡಾನೆಗಳ ಗುಂಪು ಬೀಡು ಬಿಟ್ಟಿವೆ. ಸೋಮವಾರ ರಾತ್ರಿ ಬೇಲೂರು ಭಾಗದಿಂದ ಬಂದ ಕಾಡಾನೆಗಳ ಗುಂಪು ಹಾಂದಿ ಮಾರ್ಗವಾಗಿ ಹೊಸಳ್ಳಿ, ಗುಪ್ತಶೆಟ್ಟಿಹಳ್ಳಿ ಕಠಾರದಹಳ್ಳಿ, ಇಳೆಖಾನ್, ಚಂಡುಗೋಡು ಗ್ರಾಮಗಳ ಸುತ್ತಮುತ್ತ ಸಂಚರಿಸಿವೆ. ಮಂಗಳವಾರ ಸಂಜೆ ಕಾಡಾನೆಗಳು ಬೆಳಗೋಡು ಗ್ರಾಮದ ಸಂದೀಪ್ ನಾರಾಯಣ್ ಅವರ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದು ಅರಣ್ಯ ಇಲಾಖೆ ಆನೆಗಳ ಸಂಚಾರದ ಮೇಲೆ ನಿಗಾ ಇರಿಸಿದೆ.
ಜನರು ಹೊರಗೆ ಓಡಾಡದಂತೆ ವಾಹನದಲ್ಲಿ ಮೈಕ್ ಮೂಲಕ ಸೂಚನೆ ನೀಡಿದ್ದಾರೆ. ಬೇಲೂರಿನಿಂದ ಬಂದಿರುವ ಕಾಡಾನೆಗಳಲ್ಲಿ ಕಾಲರ್ ಐಡಿ ಇಲ್ಲ. ಬೀಟಮ್ಮ ಹಾಗೂ ಭುವನೇಶ್ವರಿ ತಂಡದ 22 ಆನೆಗಳೇ ಪ್ರತ್ಯೇಕ ತಂಡ ಮಾಡಿಕೊಂಡು ಸಂಚರಿಸುತ್ತಿದ್ದು, ಈ ಗುಂಪಿನಲ್ಲಿ 3-4 ಮರಿ ಆನೆಗಳಿದ್ದು, ಆಹಾರ ಅರಸಿ ಮಲೆನಾಡಿಗೆ ಬಂದಿವೆ. ಆನೆಗಳನ್ನು ಕಾಡಿನತ್ತ ಓಡಿಸಲು ಕುಮ್ಕಿ ಆನೆಗಳಾದ, ಭೀಮ, ಧನಂಜಯ, ಅಭಿಮನ್ಯು, ಮಹೇಂದ್ರ ಆನೆಗಳನ್ನು ತರಿಸಿದ್ದು ಬಸರವಳ್ಳಿ ಗ್ರಾಮದಲ್ಲಿ ಆನೆಗಳನ್ನು ಇರಿಸಲಾಗಿದೆ. ಈ ಆನೆಗಳನ್ನು ಬಳಸಿಕೊಂಡು ಕಾಡಾನೆಗಳ ಗುಂಪನ್ನು ಕಾಡಿಗೆ ಅಟ್ಟಲು ಕ್ರಮ ಕೈಗೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಚಿದಾನಂದ್, ಸಂದೀಪ್, ರಶ್ಮಿ, ಅರಣ್ಯ ರಕ್ಷಕರಾದ ಕಿಶೋರ್, ಚೇತನ್, ತೀರ್ಥಕುಮಾರ್, ಪ್ರಕಾಶ್, ದೂಜಾ, ವಿಜಯೇಂದ್ರ, ಆನೆ ಕಾರ್ಯಪಡೆ ಸಿಬ್ಬಂದಿ ಇದ್ದರು.