

ಬೆಳಗಾವಿ: ಸ್ವಾತಂತ್ರಹೋರಾಟದ ಕಹಳೆ ಮೊಳಗಿದ್ದು ಗಂಡುಮೆಟ್ಟಿನ ನೆಲವಾದ ಬೆಳಗಾವಿಯಿಂದಲೇ ಎಂಬುದನ್ನು ನಾವೆಲ್ಲರೂ ಗಮನಿಸಲೇಬೇಕು ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ಲಿಂಗರಾಜು ಕಾಲೇಜಿನ ಆವರಣದಲ್ಲಿ ಸೋಮವಾರ ಸ್ವಾತಂತ್ರೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. 1823ರಲ್ಲಿ ವೀರರಾಣಿ ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿ ರಾಣಿ ಚೆನ್ನಮ್ಮಳು ಬ್ರಿಟಿಷರ ವಿರುದ್ಧ ಹೋರಾಡಿ ವೀರಮಹಿಳೆ. ಜತೆಗೆ ಸಂಗೊಳ್ಳಿ ರಾಯಣ್ಣನ ಬಲಿದಾನ ಇಂದಿಗೂ ಅಜರಾಮರವಾಗಿ ಉಳಿದಿದೆ. ಭಾರತ ಬ್ರಿಟಿಷರಿಂದ ಸ್ವಾತಂತ್ರ್ಯ ಗಳಿಸಿ 75 ವರ್ಷವಾಯಿತು. ಅನೇಕ ಸೇನಾನಿಗಳ ಹೋರಾಟಗಾರರ ಬಲಿದಾನ ಹಾಗೂ ತ್ಯಾಗದಿಂದ ನಮಗೆ ಸ್ವಾತಂತ್ರ್ಯ ದೊರೆತಿದೆ ಎಂದರು.
ನಮ್ಮ ತಂದೆಯವರಾದ ಬಸವಪ್ರಭು ಕೋರೆಯವರು ವೀರಸೇನಾನಿಯಾಗಿ ಬ್ರಿಟಿಷರ ವಿರುದ್ಧ ಹೋರಾಡಿದ್ದು ಮಾತ್ರವಲ್ಲದೇ ಅನೇಕ ಹೋರಾಟಗಾರರಿಗೆ ಆಶ್ರಯ ನೀಡಿ, ಜೈಲುವಾಸ ಅನುಭವಿಸಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಸ್ವಾತಂತ್ರ್ಯ ಸೇನಾನಿಯ ಮಗ ನಾನು ಎಂಬುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ದೇಶ ಮೊದಲು ಎಂಬ ಭಾವ ನಮ್ಮಲ್ಲಿ ಗಟ್ಟಿಗೊಳ್ಳಬೇಕಾಗಿದೆ. ಜನನಿ, ಜನ್ಮಭೂಮಿಯನ್ನು ನಾವು ಪ್ರೀತಿಸಲೇಬೇಕು. ಅದರ ಋಣವನ್ನು ತೀರಿಸಲು ಆಗದು. ಪ್ರತಿಯೊಬ್ಬ
ಭಾರತೀಯನು ದುಡಿದಾಗಲೇ ದೇಶ ಪ್ರಗತಿ ಹೊಂದಲು ಸಾಧ್ಯ. ನಾನು ನನ್ನ ದೇಶಕ್ಕೆ ದುಡಿಯುತ್ತೇನೆಂಬ ಮನೋಭಾವ ಪ್ರತಿಯೊಬ್ಬರಲ್ಲಿ ಬಂದಾಗ ಮಾತ್ರ ದೇಶ ವಿಕಾಸ ಹೊಂದುತ್ತದೆ. ಅಂತೆಯೆ ಇಂದು ಭಾರತ ಪ್ರಕಾಶಿಸುತ್ತಿದೆ ಎಂದರು. ಭಾರತ ಎಲ್ಲ ೇತ್ರಗಳಲ್ಲಿಯೂ ಅಗಾಧವಾದ ಸಾಧನೆಯನ್ನು ಮಾಡುತ್ತಿದೆ.
ಆತ್ಮ ನಿರ್ಭರ, ಮೆಕಿನ್ ಇಂಡಿಯಾ, ಸ್ಕಿಲ್ ಇಂಡಿಯಾ ಇಂದು ಜಗತ್ತಿನ ಶ್ರೇಷ್ಠ ರಾಷ್ಟ್ರಗಳಿಗೆ ಸರಿಸಮಾನವಾಗಿ ಬೆಳೆದು ನಿಂತಿದೆ. ಮೊದಲಿನಂತಹ ಸ್ಥಿತಿ ಇಂದಿಲ್ಲ. ನಾವು ಬದಲಾಗುತ್ತಿದ್ದೇವೆ. ವಿದ್ಯಾರ್ಥಿಗಳಾದ ನೀವೆಲ್ಲ ಚೆನ್ನಾಗಿ ಓದಬೇಕು, ದೇಶ ಸೇವೆ ಮಾಡಬೇಕು. ದೇಶದ ವಿಕಾಸಕ್ಕೆ ದೃಢ ಸಂಕಲ್ಪ ಕೈಗೊಳ್ಳಬೇಕು ಎಂದರು. ಆಶಾ ಕೋರೆ, ಕೆಎಲ್ಇ ಸಂಸ್ಥೆಯ ಆಜೀವ ಸದಸ್ಯರು, ವಿವಿಧ ಕಾಲೇಜುಗಳ ಪ್ರಾಚಾರ್ಯರು, ವಿದ್ಯಾರ್ಥಿಗಳು ಇದ್ದರು.