

ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ಮಳೆಗಾಲದ ಪೂರ್ಣಾವಧಿ ಅಧಿವೇಶನ ನಡೆಸಬೇಕು ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ, ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮೂರು ವರ್ಷದಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಯದಿರುವುದು ಈ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಉತ್ತರ ಕರ್ನಾಟಕದ ಸಮಸ್ಯೆ ಬಗೆಹರಿಸಲು ಸರ್ಕಾರ ಪ್ರತಿವರ್ಷ ಅಧಿವೇಶನ ಆಯೋಜಿಸುವ ಸಂಕಲ್ಪ ಮಾಡಿದ್ದರೂ ಕಾರ್ಯರೂಪಕ್ಕೆ ಬಾರದಿರುವುದು ಖೇದಕರ ಸಂಗತಿ. ಈ ಭಾಗದ ಜ್ವಲಂತ ಸಮಸ್ಯೆಗಳನ್ನು ಚರ್ಚಿಸಲು,
ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿವೇಶನ ನಡೆಸುವುದು ಅಗತ್ಯ ಪ್ರತಿಪಾದಿಸಿದ್ದಾರೆ.
ಮೊಟ್ಟಮೊದಲಿಗೆ ಕೆಎಲ್‌ಇ ಅಂಗಳದಲ್ಲಿ ಯಶಸ್ವಿಯಾಗಿ ವಿಧಾನಸೌಧ ಅಧಿವೇಶನ ಜರುಗಿತ್ತು. ಬಳಿಕ ಬೆಳಗಾವಿಯನ್ನೇ ಎರಡನೇ ರಾಜಧಾನಿಯನ್ನಾಗಿ ಮಾಡಬೇಕು. ಸುವರ್ಣ ವಿಧಾನಸೌಧ ನಿರ್ಮಾಣಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದ ಬಳಿಕ ಸೌಧ ನಿರ್ಮಾಣವೂ ಆಗಿ ಹೊಸ ಭರವಸೆ ಮೂಡಿಸಿತ್ತು. ಆದರೆ, ಆ ಸೌಧದಲ್ಲಿ ಕಾಲಕಾಲಕ್ಕೆ ಅಧಿವೇಶನಗಳು ನಡೆಯದ್ದರಿಂದ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಇಲ್ಲದಂತಾಗಿದೆ ಎಂದು ಡಾ. ಕೋರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಧಿವೇಶನಗಳು ಪೂರ್ಣಾವಧಿಗೆ ಜರುಗಬೇಕೆಂದರೆ ಶಾಸಕರ ಭವನ, ಸಿಬ್ಬಂದಿ ವಸತಿ ಗೃಹಗಳು, ಊಟೋಪಚಾರದ ಕ್ಯಾಂಟೀನ್‌ಗಳು ನಿರ್ಮಾಣಗೊಳ್ಳಬೇಕು. ಮಳೆಗಾಲದಲ್ಲಾಗಲಿ ಅಥವಾ ಚಳಿಗಾಲದಲ್ಲಾಗಲಿ ಕನಿಷ್ಠ 30 ದಿನಗಳ ವರೆಗೆ ಪೂರ್ಣಾವಧಿಯ ಅಧಿವೇಶನಗಳು ಜರುಗಲೇಬೇಕು ಎಂದು ಡಾ.ಕೋರೆ ಸರ್ಕಾರವನ್ನು ಆಗ್ರಹಿಸಿದ್ದಾರೆ.