ಬೆಳಗಾವಿಯಲ್ಲಿ ಶಾಂತಿ ಕದಡುವ ಕೆಲಸವನ್ನು ಮಹಾರಾಷ್ಟ್ರ ಸರ್ಕಾರ ಮಾಡುತ್ತಿದೆ: ಸಿ.ಡಿ. ಮನುಕುಮಾರ್

ಬೆಳಗಾವಿಯಲ್ಲಿ ಶಾಂತಿ ಕದಡುವ ಕೆಲಸವನ್ನು ಮಹಾರಾಷ್ಟ್ರ ಸರ್ಕಾರ ಮಾಡುತ್ತಿದೆ: ಸಿ.ಡಿ. ಮನುಕುಮಾರ್
Published on

ಹಾಸನ: ಗಡಿ ವಿವಾದ ಮುಂದಿಟ್ಟುಕೊಂಡು ಮಹಾರಾಷ್ಟ್ರದಲ್ಲಿ ಕನ್ನಡಿಗರು ಮತ್ತು ಕನ್ನಡಿಗರ ಆಸಿಪಾಸ್ತಿ ಮೇಲೆ ದಾಳಿ ನಡೆಸುತ್ತಿರುವ ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.


ನಗರದ ಪ್ರವಾಸಿ ಮಂದಿರದಿಂದ ನರಸಿಂಹರಾಜ ವೃತ್ತದವರೆಗೆ ಮೆರವಣಿಗೆ ನಡೆಸಿ ವೃತ್ತದಲ್ಲಿ ಮಾನವ ಸರಪಳಿ ರಚಿಸುವ ಮೂಲಕ ರಸ್ತೆ ತಡೆ ನಡೆಸಿರು. ಅಲ್ಲದೆ, ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆ ಪಕ್ಷಗಳ ಪ್ರತಿಕೃತಿ ದಹಿಸಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.


ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಮಾತನಾಡಿ, ಬೆಳಗಾವಿಯಲ್ಲಿ ಶಾಂತಿ ಕದಡುವ ಕೆಲಸವನ್ನು ಮಹಾರಾಷ್ಟ್ರ ಸರ್ಕಾರ ಮಾಡುತ್ತಿದೆ. ಶಿವಸೇನೆ, ಎಂಇಎಸ್ ಮತ್ತು ಎನ್‌ಸಿಪಿ ಮುಖಂಡರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಕನ್ನಡಿಗರು ಮತ್ತು ಮರಾಠಿಗರ ನಡುವೆ ಧ್ವೇಷ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಭಾಷಾವಾರು ಪ್ರಾಂತ್ಯಗಳ ರಚನೆ ಸಂದರ್ಭದಲ್ಲಿ ಕರ್ನಾಟಕ ಅನೇಕ ಕನ್ನಡ ಭಾಷಿಕ ಪ್ರದೇಶಗಳನ್ನು ಕಳೆದುಕೊಂಡರೂ ಭಾರತದ ಐಕ್ಯತೆಗೆ ಭಂಗ ತರಬಾರದು ಎಂಬ ವಿಶಾಲ ಮನೋಭಾವದಿಂದ ಸಹಿಸಿಕೊಂಡು ಬಂದಿದೆ. ಅಪ್ಪಟ ಕನ್ನಡ ನೆಲವಾದ ಬೆಳಗಾವಿ ತನಗೆ ಸೇರಬೇಕು ಎಂಬುದಾಗಿ ಮಹಾರಾಷ್ಟ್ರ ಮೊದಲಿನಿಂದಲೂ ಖ್ಯಾತೆ ತೆಗೆದು ಗಡಿ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ ಮಾಡುತ್ತಿದೆ. ಮಹಾರಾಷ್ಟ್ರದ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ರಚಿಸಿದ್ದ ಮೆಹರ್‌ಚಂದ್ ಮಹಾಜನ್ ಆಯೋಗ ಸಹ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕು ಎಂಬುದಾಗಿ ವರದಿ ನೀಡಿದೆ. ಆದರೂ ಅಲ್ಲಿನ ರಾಜಕಾರಣಿಗಳು ಸಂಘರ್ಷದ ವಾತಾವರಣ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿದರು.


ಕಳೆದ ಒಂದು ವಾರದಿಂದ ಮಹಾರಾಷ್ಟ್ರದಲ್ಲಿ ಕನ್ನಡಿಗರು ಮತ್ತು ಕನ್ನಡಿಗರ ಆಸ್ತಿಪಾಸ್ತಿ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿರುವುದು ಖಂಡನೀಯ. ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯೆ ಪ್ರವೇಶಿಸಿ, ಬೆಳಗಾವಿಯಲ್ಲಿ ಶಾಂತಿ ಸ್ಥಾಪನೆ ಸಲುವಾಗಿ ತಕ್ಷಣ ಎಂಇಎಸ್ ಮೇಲೆ ನಿಷೇಧ ಹೇರಬೇಕು ಹಾಗೂ ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಮತ್ತು ಅವರ ಆಸ್ತಿಪಾಸ್ತಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.


ಕೊನೆಯಲ್ಲಿ ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಪತ್ರ ಸಲ್ಲಿಸಿದರು. ಕರವೇ ಜಿಲ್ಲಾ ಉಪಾಧ್ಯಕ್ಷ ಸೀತಾರಾಮ್, ಪದಾಧಿಕಾರಿಗಳಾದ ಗಣೇಶ್ ಗೌಡ, ಮಧು ಕರಡೇವು, ಅಭಿ ಗೌಡ, ರಘು ಪಾಳ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net