ಬೆಳಗಾವಿಯಲ್ಲಿ ರಾಜ್ಯೋತ್ಸವ ಅದ್ದೂರಿ ಆಚರಣೆಗೆ ನಿರ್ಧಾರ

11-10
ರಾಜ್ಯೋತ್ಸವ ದಿನಾಚರಣೆ ಸಿದ್ಧತೆ ಕುರಿತು ಸೋಮವಾರ ಪೂರ್ವಭಾವಿ ಸಭೆ ಜರುಗಿತು. ಜಿಪಂ ಸಿಇಒ ದರ್ಶನ್ ಎಚ್.ವಿ., ಎಸ್ಪಿ ಡಾ.ಸಂಜೀವ ಪಾಟೀಲ, ಡಿಸಿಪಿ ರವೀಂದ್ರ ಗಡಾದಿ, ಎಡಿಸಿ ಅಶೋಕ ದುಡಗುಂಟಿ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಇದ್ದರು.
Published on

ಬೆಳಗಾವಿ: ಎರಡು ವರ್ಷ ಸರಳವಾಗಿ ಆಚರಿಸಿದ್ದ ರಾಜ್ಯೋತ್ಸವವನ್ನು ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು. ರಾಜ್ಯೋತ್ಸವವನ್ನು ಮತ್ತಷ್ಟು ಅರ್ಥಪೂರ್ಣವಾಗಿಸುವುದಕ್ಕಾಗಿ ಪರೇಡ್ ಮೈದಾನದ ಬದಲು, ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನಡೆಸೋಣ ಎಂದು ಜಿಲ್ಲಾಧಿಕಾರಿ ಡಾ.ನಿತೇಶ ಪಾಟೀಲ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕರೆಯಲಾಗಿದ್ದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಸಿದ್ಧತೆ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನ.1ರಂದು ಮೆರವಣಿಗೆ ಹಾಗೂ 2ರಂದು ವೇದಿಕೆ ಕಾರ್ಯಕ್ರಮ ಆಯೋಜಿಸಲಾಗುವುದು ಎಂದ ಅವರು, ಉತ್ಸವ ಆಚರಣೆಗೆ ಒಂದು ಕೋಟಿ ರೂ.ಹಣ ಮಂಜೂರು ಮಾಡುವಂತೆ ಶಿಫಾರಸು ಮಾಡಲಾಗುವುದು ಎಂದರು.

ಜಿಲ್ಲಾಡಳಿತ ಸೇರಿ ವಿವಿಧ ಇಲಾಖೆಗಳು ತಮ್ಮದೇ ಶೈಲಿಯಲ್ಲಿ ವೈಭವಪೂರ್ಣ ರೂಪಕ ಪ್ರದರ್ಶಿಸಬೇಕು. ಜತೆಗೆ ಕನ್ನಡಪರ ವಿವಿಧ ಸಂಘಟನೆಗಳು ನಾಡು, ನುಡಿ, ಸಂಸ್ಕೃತಿ ಬಿಂಬಿಸುವ ಸ್ತಬ್ಧಚಿತ್ರ ಪ್ರದರ್ಶಿಸಲಿವೆ. ಭುವನೇಶ್ವರಿ ದೇವಿ ರೂಪಕಕ್ಕೆ ಪೂಜಿಸುವ ಮೂಲಕ ಸ್ತಬ್ಧಚಿತ್ರಗಳ ಮೆರವಣಿಗೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ. ನಗರದ ಚನ್ನಮ್ಮ ವೃತ್ತ ಸೇರಿ ವಿವಿಧ ಮುಖ್ಯ ವೃತ್ತ, ರಸ್ತೆಗಳಲ್ಲಿ ರೂಪಕಗಳ ಮೆರವಣಿಗೆ ಸಾಗಲಿದೆ ಎಂದರು. ಪೊಲೀಸ್ ಇಲಾಖೆ, ಎನ್‌ಸಿಸಿ., ಸ್ಕೌಟ್ಸ್, ಗೈಡ್ಸ್ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಪರೇಡ್ ನಡೆಸಲಾಗುವುದು. ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿ ಕನ್ನಡ ರಾಜ್ಯೋತ್ಸವದ ಕಳೆ ಹೆಚ್ಚಿಸಬೇಕು ಎಂದು ಶಿಕ್ಷಣ ಇಲಾಖಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಕನ್ನಡಪರ ಹೋರಾಟಗಾರ ಮೆಹಬೂಬ ಮಕಾನದಾರ್ ಮಾತನಾಡಿ, ಡಿಜೆ ಹಾವಳಿ ಕಡಿಮೆ ಮಾಡುವ ನಿಟ್ಟಿನಲ್ಲಿ ಅದ್ಭುತ ರೂಪಕಗಳಿಗೆ ಹೆಚ್ಚಿನ ಬಹುಮಾನ ನೀಡಿ, ಪ್ರೋತ್ಸಾಹಿಸಬೇಕು. ಇದರಿಂದ ಪೈಪೋಟಿ ಹೆಚ್ಚಾಗಿ ಹೆಚ್ಚಿನ ರೂಪಕಗಳು ಆಗಮಿಸುತ್ತವೆ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ನಿತೇಶ, ಅಲಂಕೃತ, ನಾಡ ಸಂಸ್ಕೃತಿ ಪ್ರತಿಬಿಂಬಿಸುವ ಅತ್ಯದ್ಭುತ ಮೂರು ರೂಪಕಗಳನ್ನು ಗುರುತಿಸಿ, ಕಳೆದ ಬಾರಿಗಿಂತ ದುಪ್ಪಟ್ಟು ಅಂದರೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಿಗೆ 30, 15, ಹಾಗೂ 10 ಸಾವಿರ ರೂ.ನಗದು ಬಹುಮಾನ ನೀಡುವ ಮೂಲಕ ಪ್ರೋತ್ಸಾಹಿಸಲಾಗುವುದು.
ಪ್ರತಿ ವರ್ಷದಂತೆ ಈ ವರ್ಷವೂ 5 ಜನ ಹಿರಿಯ ಪತ್ರಕರ್ತರಿಗೆ, 5 ಜನ ಕನ್ನಡ ಹೋರಾಟಗಾರರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅದಕ್ಕಾಗಿ 5 ಜನರ ಸಮಿತಿ ರಚಿಸಿ ಸಮಿತಿಯ ಸಲಹೆ ಸೂಚನೆಯಂತೆ ಪತ್ರಕರ್ತರು ಹಾಗೂ ಹೋರಾಟಗಾರರನ್ನು ಆಯ್ಕೆ ಮಾಡಲಾಗುವುದು ಎಂದರು.

ರೂಪಕಗಳ ಮೆರವಣಿಗೆ ಸೇರಿ ರಾಜ್ಯೋತ್ಸವ ಆಚರಣೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಇಲಾಖೆ ಬದ್ಧತೆಯೊಂದಿಗೆ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗುವುದು. ಅಗತ್ಯಬಿದ್ದರೆ ಹೊರ ಜಿಲ್ಲೆಗಳಿಂದಲೂ ಸಿಬ್ಬಂದಿ ಕರೆಯಿಸಲಾಗುವುದು ಎಂದು ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ತಿಳಿಸಿದರು.
ಸಭೆಯಲ್ಲಿ ಜಿಪಂ ಸಿಇಒ ದರ್ಶನ್ ಎಚ್.ವಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಡಿಸಿಪಿ ರವೀಂದ್ರ ಗಡಾದಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಉಮಾ ಸಾಲಿಗೌಡರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಕನ್ನಡಪರ ಸಘಟನೆಗಳ ಪದಾಧಿಕಾರಿಗಳು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net