ಬೆಳಗಾವಿಯಲ್ಲಿ ನೆಲಕಚ್ಚಿದ ಬಿಜೆಪಿಗೆ ನಾಯಕ ಯಾರು? !

Published on

ಲಿಂಗಾಯತ ಸಮುದಾಯದ ಕಡೆಗಣನೆ ! ಸೋತ ಕಮಲಕ್ಕೆ ಟಾನಿಕ್ ನೀಡುವರು ಯಾರು?

ರಾಯಣ್ಣ ಆರ್.ಸಿ.
ಬೆಳಗಾವಿ:ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಸೋತು ಸುಣ್ಣವಾಗಿರುವ ಬಿಜೆಪಿ ಜಿಲ್ಲೆಯಾದ್ಯಂತ ನೆಲಕಚ್ಚಿದ್ದು, ಇನ್ನೂ ಲೋಕಸಭಾ ಚುನಾವಣೆಗೆ 8 ತಿಂಗಳು ಬಾಕಿಯಿರುವುದರಿಂದ ಸೋತ ‘ಕಮಲ’ದ ಪಾರ್ಟಿಗೆ ಟಾನಿಕ್ ನೀಡುವರು ಯಾರು? ಎಂಬ ಚಿಂತೆ ಹೈಕಮಾಂಡ್ ನಾಯಕರನ್ನು ಕಾಡುತ್ತಿದೆ.
ಭಾರತೀಯ ಜನತಾ ಪಕ್ಷವೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಯಿಸಿ, ರೋಡ್ ಶೋ ಪ್ರಚಾರ ಸಭೆಗಳನ್ನು ಮಾಡಿದ್ದಾರೆ. ರಾಯಬಾಗ ತಾಲೂಕಿನ ಕುಡಚಿ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಸೋತಿದೆ.ಪ್ರಬಲ ಲಿಂಗಾಯತ ನಾಯಕರಾಗಿದ್ದ ದಿ.ಉಮೇಶ ಕತ್ತಿ, ಸುರೇಶ ಅಂಗಡಿ ನಿಧನರಾದ ಬಳಿಕ ಪಕ್ಷವೂ ನಿಧಾನಗತಿಯಲ್ಲಿ ಕುಂಟುತ್ತ ಸಾಗಿದೆ. ಸೋತು ಹೋಗಿದ್ದ ಲಕ್ಷ್ಮಣ ಸವದಿ ಅವರನ್ನು ಡಿಸಿಎಂ ಮಾಡಿದರೂ ನಿರೀಕ್ಷಿತ ಮಟ್ಟದಲ್ಲಿ ‘ಕಮಲ’ ಚಿಗಿತುಕೊಳ್ಳಲಿಲ್ಲ ಎಂಬ ತಿರ್ಮಾನಕ್ಕೆ ಬಂದಿದ್ದ ಬಿಜೆಪಿ ಹೈಕಮಾಂಡ್ ಸವದಿ ಅವರಿಗೂ ಕೊನೆ ಘಳಿಗೆಯಲ್ಲಿ ಟಿಕೆಟ್ ತಪ್ಪಿಸಿ, ಮತ್ತೊಂದು ಎಡವಟ್ಟು ಮಾಡಿಕೊಂಡಿತು.

ಲಿಂಗಾಯತ ಸಮುದಾಯದ ಮುಖಂಡರಿಗೆ ಅನ್ಯಾಯ, ಪಂಚಮಸಾಲಿ ಸಮುದಾಯದ ತೀವ್ರ ಹೋರಾಟ ನಡೆದಾಗ, ಸಕಾಲಕ್ಕೆ ಬಿಜೆಪಿ ರಾಜ್ಯ ನಾಯಕರಿಂದ ಸ್ಪಂದನೆ ದೊರೆಯದ ಕಾರಣ, ಅತಿಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಬಿಜೆಪಿ ಭದ್ರಕೋಟೆ ಕುಸಿದು ಬಿದ್ದಿತು. ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರಿಗೆ ರಾಜ್ಯಸಭೆ ಟಿಕೆಟ್ ತಪ್ಪಿಸಿದ ಬಳಿಕ, ಡಾ.ಕೋರೆ ಅವರ ಜನ್ಮ ದಿನಾಚರಣೆಗೆ ಬೆಳಗಾವಿಗೆ ಆಗಮಿಸಿದ್ದ ಕೇಂದ್ರ ಸಚಿವರೊಬ್ಬರು, ಶೀಘ್ರದಲ್ಲಿಯೇ ಭಾರತೀಯ ಜನತಾ ಪಕ್ಷವೂ ಡಾ.ಪ್ರಭಾಕರ ಕೋರೆ ಅವರಿಗೆ ಸೂಕ್ತ ಸ್ಥಾನ ಮಾನ ನೀಡಲಿದೆ ಎಂದು ಹೇಳಿ ವರ್ಷವಾದರೂ, ಯಾವುದೇ ಸ್ಥಾನ ನೀಡಲಿಲ್ಲ. ಹಾಗಾಗಿ ಬಿಜೆಪಿಯಲ್ಲಿ ಲಿಂಗಾಯತ, ಕುರುಬ ಹಾಗೂ ತಳಸಮುದಾಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ ಎಂಬ ಧೋರಣೆಯಿಂದಾಗಿ, ಮತದಾರರು ‘ಕೈ’ಗೆ ಒಲವು ತೋರಿಸಿದ್ದರಿಂದ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ. ಬಿಜೆಪಿಯಲ್ಲಿಯೂ ಜಾರಕಿಹೊಳಿ ಬಣ, ಕಡಾಡಿ ಬಣ ಹೀಗೆ ನಾಲ್ಕೈದು ಬಣಗಳಿಂದಾಗಿ ಬಿಜೆಪಿ ‘ಭಣ-ಭಣ’ ಎನ್ನುವಂತಾಗಿದೆ. 18 ಸ್ಥಾನಗಳಲ್ಲಿ 7 ಜನ ಮಾತ್ರ ಬಿಜೆಪಿಯಿಂದ ಗೆಲ್ಲಲು ಸಾಧ್ಯವಾಯಿತು.

ಇದು ಕಳೆದ 30 ವರ್ಷಗಳಿಂದ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಕಾರ್ಯಕರ್ತರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಬೇರು ಮಟ್ಟದಲ್ಲಿ ಪುನ: ಭಾರತೀಯ ಜನತಾ ಪಕ್ಷವನ್ನು ಬಲಿಷ್ಠಗೊಳಿಸದಿದ್ದರೇ, ಎರಡೂ ಲೋಕಸಭಾ ಸ್ಥಾನಗಳು ಕಾಂಗ್ರೆಸ್ ಪಡೆಯ ತೆಕ್ಕೆಗೆ ಬೀಳಲಿವೆ. ಈಗಾಗಲೇ ಕರ್ನಾಟಕದ ಮಳೆಗಾಲದ ಅಧಿವೇಶನ ಮುಗಿದರೂ, ವಿರೋಧ ಪಕ್ಷ ಸ್ಥಾನ ತುಂಬುವುದಕ್ಕೂ ಬಿಜೆಪಿ ಹರಸಾಹಸ ಮಾಡುತ್ತಿರುವುದು ಚರ್ಚೆಯ ವಿಷಯವಾಗಿದೆ.

ಲೋಕಸಭಾ ಚುನಾವಣೆ ಆಗಮಿಸುತ್ತಿರುವುದರಿಂದ ಭಾರತೀಯ ಜನತಾ ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟಿಸುವುದಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಬೂತಮಟ್ಟದಲ್ಲಿ ಕಾರ್ಯಕರ್ತರ ಪಡೆಯ ಪ್ರಧಾನಿ ಮೋದಿ ಅವರ 9 ವರ್ಷಗಳ ಸಾಧನೆಗಳನ್ನು ಜನತೆಗೆ ತಲುಪಿಸುವುದಕ್ಕಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಡಾ.ರಾಜೇಶ ನೇರ್ಲಿಅಧ್ಯಕ್ಷರು,ಬಿಜೆಪಿ ಜಿಲ್ಲಾ ಘಟಕ, ಚಿಕ್ಕೋಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net