ಬೆಳಗಾವಿಯಲ್ಲಿ ಧರಣಿ ನಡೆಸುವ ಎಚ್ಚರಿಕೆ

Published on

ಹುಬ್ಬಳ್ಳಿ: ಅಲೆಮಾರಿ ಹಾಗೂ ಅರೆಅಲೆಮಾರಿ ಸಮುದಾಯಗಳಾದ ಗೋಂಧಳಿ, ಬುಡಬುಡಕಿ, ಜೋಶಿ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಾದೇಶ ನೀಡಬೇಕು. ಇಲ್ಲದಿದ್ದರೆ ಡಿ. 19ರಂದು ಬೆಳಗಾವಿಯಲ್ಲಿ ಧರಣಿ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ಗೋಂಧಳಿ ಸಮಾಜ ಸಂಘದ ಅಧ್ಯಕ್ಷ ವಿಠ್ಠಲ ಗಣಾಚಾರಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಂಧಳಿ, ಬುಡಬುಡಕಿ, ಜೋಶಿ ಸಮುದಾಯಗಳಿಗೆ ನೀಡುತ್ತಿರುವ ಜಾತಿ ಪ್ರಮಾಣ ಪತ್ರದಲ್ಲಿ ಅಲೆಮಾರಿ ಎಂದು ನಮೂದಿಸಬೇಕು. ಈ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ. 30ರಷ್ಟು ಒಳಮೀಸಲಾತಿ ನೀಡಬೇಕು. ಟೆಂಟ್ ಮತ್ತು ಗುಡಿಸಲು ಮುಕ್ತಗೊಳಿಸಬೇಕು. ಅಲೆಮಾರಿ ಜೀವನದಲ್ಲಿರುವಾಗ ಅಪಘಾತವಾಗಿ ಮರಣ ಹೊಂದಿದ ಕುಟುಂಬದ ಸದಸ್ಯರ ಜೀವನೋಪಾಯಕ್ಕೆ 20 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಸಣ್ಣಪುಟ್ಟ ವ್ಯಾಪಾರಿಗಳಿಗೆ 3 ಲಕ್ಷ ರೂ. ಸಹಾಯಧನ ನೀಡಬೇಕು. ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಟೇಲರಿಂಗ್ ಹಾಗೂ ಇತರ ಕರಕುಶಲ ಉದ್ಯೋಗಗಳಿಗೆ ಉಚಿತ ತರಬೇತಿ ನೀಡಬೇಕು ಸೇರಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿದರು. ಕುಲಶಾಸ್ತ್ರೀಯ ಅಧ್ಯಯನ ಕಾರ್ಯವು ಕಳೆದ 4 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಇದರಿಂದ ಸಮಾಜದವರು ತಾಳ್ಮೆ ಕಳೆದುಕೊಂಡಿದ್ದಾರೆ ಎಂದರು.

ಧಾರವಾಡ ಜಿಲ್ಲಾಧ್ಯಕ್ಷ ನಾಗಭೂಷಣ ಮುಕ್ಕೆ, ಎಂ.ಬಿ. ಶಾಸ್ತ್ರಿ, ನಾಗರಾಜ ಗೊಗರೆ, ಸಂತೋಷ ಶಿಂಧೆ, ತುಕಾರಾಮ ಶಿಂಧೆ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net