ಬೆಳಗಾವಿಯಲ್ಲಿ ಅದ್ದೂರಿ ರಾಜ್ಯೋತ್ಸವ ಇಂದು

31-4
ಬೆಳಗಾವಿ ನಗರದ ಪ್ರಮುಖ ರಸ್ತೆಗಳಲ್ಲಿ ರಾರಾಜಿಸುತ್ತಿರುವ ಸ್ವಾಗತ ಕಮಾನುಗಳು.
Published on

ಬೆಳಗಾವಿ: ಅದ್ದೂರಿತನ, ಸಂಭ್ರಮದಿಂದ ದೇಶದ ಗಮನ ಸೆಳೆಯುವ ಕುಂದಾನಗರಿ ರಾಜ್ಯೋತ್ಸವಕ್ಕೆ ಈ ಬಾರಿ ಭರ್ಜರಿ ಸಿದ್ಧತೆ ನಡೆದಿವೆ. ನ.1ರಂದು ಆಚರಿಸಲ್ಪಡುವ ಕನ್ನಡ ಹಬ್ಬಕ್ಕೆ ವಿವಿಧೆಡೆಯಿಂದ ಲಕ್ಷಾಂತರ ಜನರು ಆಗಮಿಸಲಿದ್ದಾರೆ. ಎರಡು ವರ್ಷಗಳಿಂದ ರಾಜ್ಯೋತ್ಸವ ಆಚರಣೆ ಇಲ್ಲದೆ ಕಳೆಗುಂದಿದ್ದ ಕನ್ನಡ ಹಬ್ಬ ಈ ಬಾರಿ ರಂಗೇರಲಿದ್ದು, ಪ್ರಮುಖ ವೃತ್ತಗಳಲ್ಲಿ ಕನ್ನಡ ಧ್ವಜ ಹಾರಿಸಿ, ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಉತ್ಸವದ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳು, ಅಶ್ವಾರೂಢ ಚನ್ನಮ್ಮ ಪುತ್ಥಳಿ, ಸಂಗೊಳ್ಳಿ ರಾಯಣ್ಣ ಮತ್ತು ಬಸವೇಶ್ವರ ಪುತ್ಥಳಿ ಸ್ವಚ್ಛಗೊಳಿಸಿ ಸಿಂಗಾರಗೊಳಿಸಲಾಗಿದೆ.ಜಿಲ್ಲಾಡಳಿತ ಈಗಾಗಲೇ ನಗರದ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಒಳಗೊಂಡಿರುವ ಕನ್ನಡ ರಾಜ್ಯೋತ್ಸವದ ಶುಭ ಕೋರುವ ಫಲಕ ಅಳವಡಿಸಲಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು ಮತ್ತು ಕನ್ನಡ ಚಿತ್ರರಂಗದ ಕಲಾವಿದರ ಭಾವಚಿತ್ರ ಒಳಗೊಂಡಿರುವ ರಾಜ್ಯೋತ್ಸವ ಫಲಕ ನಗರಾದ್ಯಂತ ವಿಜೃಂಭಿಸುತ್ತಿವೆ. ರಾಜ್ಯೋತ್ಸವ ಮೆರವಣಿಗೆಗೆ ರಾಜ್ಯದ ವಿವಿಧ ಭಾಗಗಳಿಂದ ಹತ್ತು ಕಲಾ ತಂಡಗಳು ಭಾಗವಹಿಸುತ್ತಿವೆ. ಅಲ್ಲದೆ, ಜಿಲ್ಲೆಯ ಸ್ಥಳೀಯ ಮಟ್ಟದ ಕಲಾವಿದರು ಭಾಗವಹಿಸುತ್ತಿದ್ದಾರೆ. ನವೆಂಬರ್ 2ರಂದು ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ರಾಜ್ಯೋತ್ಸವ ಅಂಗವಾಗಿ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಲಿವೆ. ನೃತ್ಯ, ನಾಟಕ, ಸಂಗೀತ ಸೇರಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

ಈ ಬಾರಿ ರಾಜ್ಯೋತ್ಸವ ಮೆರವಣಿಗೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳು ಹಾಗೂ ಕನ್ನಡ ಪರ ಸಂಘಟನೆಗಳಿಂದ ಒಟ್ಟು 120 ರೂಪಕಗಳ ವಾಹನಗಳು ಭಾಗವಹಿಸಲಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ತಮ್ಮ ವ್ಯಾಪ್ತಿಯ ಯೋಜನೆಗಳ ಅನುಷ್ಠಾನ, ಪ್ರಗತಿ ಹಾಗೂ ಸಮಗ್ರ ಅಭಿವೃದ್ಧಿ ಕಾಮಗಾರಿಗಳನ್ನು ಪ್ರದರ್ಶಿಸಲಾಗುತ್ತಿದೆ. ಅಲ್ಲದೆ, ಪರಿಸರ ಸಂರಕ್ಷಣೆ, ಕನ್ನಡ ಹೋರಾಟಗಾರರ, ಸಾಹಿತಿಗಳ ಮಾಹಿತಿ ಒಳಗೊಂಡಿರುವ ರೂಪಕ ವಾಹನಗಳು ಮೆರವಣಿಗೆಯಲ್ಲಿ ಸಂಚರಿಸಲಿವೆ. ಮತ್ತೊಂದೆಡೆ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಕಾಕತಿ ವೇಸ್ ಮಾರ್ಗದಲ್ಲಿ ರೂಪಕ ವಾಹನಗಳನ್ನು ಸ್ವಾಗತಿಸಲು ಮಾರ್ಗದುದ್ದಕ್ಕೂ ವೇದಿಕೆ ನಿರ್ಮಿಸಲಾಗಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ನ.1ರಂದು ಬೆಳಗ್ಗೆ 10.30ಕ್ಕೆ ರಾಜ್ಯೋತ್ಸವ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಗೋವಿಂದ ಕಾರಜೋಳ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ತಾಯಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ರಾಜ್ಯೋತ್ಸವ ಮೆರವಣಿಗೆ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ವೀಕ್ಷಣೆಗೆ ಆಗಮಿಸುವವರಿಗೆ 1 ಲಕ್ಷ ಹೋಳಿಗೆ: ಎರಡನೇ ರಾಜಧಾನಿ ಬೆಳಗಾವಿಯಲ್ಲಿ ಕನ್ನಡ ಹಬ್ಬ ರಾಜ್ಯೋತ್ಸವ ಸಂಭ್ರಮ ಸಡಗರ ಮನೆ ಮಾಡಿದ್ದು, ರಾಜ್ಯೋತ್ಸವ ವೀಕ್ಷಣೆಗಾಗಿ ಬರುವ ಜನರಿಗಾಗಿ ಹುಕ್ಕೇರಿ ಹಿರೇಮಠ ಭರ್ಜರಿ ಊಟದ ವ್ಯವಸ್ಥೆ ಮಾಡಿದೆ. ಅಲ್ಲದೆ, 1 ಲಕ್ಷ ಹೋಳಿಗೆ ತಯಾರಿಸಲಾಗುತ್ತಿದೆ.

ರಾಜ್ಯದ ಗಡಿನಾಡಿನಲ್ಲಿ ಸದಾ ಕನ್ನಡ ಕೈಂಕರ್ಯ ಮಾಡಿಕೊಂಡು ಬರುತ್ತಿರುವ ಹುಕ್ಕೇರಿ ಹಿರೇಮಠವು ಗಡಿಭಾಗದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಕನ್ನಡ ಭಾಷೆ ಉಳಿಸಲು ಶ್ರಮಿಸುತ್ತಿದೆ. ಈ ಬಾರಿ ರಾಜ್ಯೋತ್ಸವ ಮೆರವಣಿಗೆ ವೀಕ್ಷಣೆಗೆ ರಾಜ್ಯ, ಜಿಲ್ಲೆಯ ವಿವಿಧ ಭಾಗಗಳಿಂದ ಬೆಳಗಾವಿಗೆ ಬರುವ
ಸಾವಿರಾರು ಜನರಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಿದೆ.

ಬೆಳಗಾವಿ ನಗರದ ಸರ್ಕಾರಿ ಸರ್ದಾರ್ ಪ್ರೌಢಶಾಲೆ ಮೈದಾನದಲ್ಲಿ ಹೋಳಿಗೆ ಊಟದ ವ್ಯವಸ್ಥೆಗೆ ಸಿದ್ಧತೆ ಕೈಗೊಂಡಿದ್ದು, ಹುಕ್ಕೇರಿ, ಬೆಳಗಾವಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿರುವ ಸುಮಾರು 150 ಮಹಿಳೆಯರು ಹೋಳಿಗೆ ತಯಾರಿಸುತ್ತಿದ್ದಾರೆ. ಅಲ್ಲದೆ, ಬದನೆಕಾಯಿ ಪಲ್ಯ, ಅನ್ನ, ಸಾಂಬಾರ ತಯಾರಿಸಲು 50 ಜನ ಬಾಣಸಿಗರು ಆಗಮಿಸಿದ್ದಾರೆ. ಕೆಲ ಕನ್ನಡಿಗರು ರಾಜ್ಯೋತ್ಸವಕ್ಕೆ ಆಗಮಿಸುವ ಜನರಿಗೆ ಸ್ವಯಂ ಪ್ರೇರಣೆಯಿಂದ ಖಡಕ್ ಜೋಳದ ರೊಟ್ಟಿ ವಿತರಿಸಲಿದ್ದಾರೆ. ಹೋಳಿಗೆ ತಯಾರಿಸಲು ಗುಜರಾತ್‌ನಿಂದ ಗೋಧಿ ಹಿಟ್ಟು , ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಿಂದ ಬೆಲ್ಲ, ಗದಗದಿಂದ ಬೇಳೆ, ದಾವಣಗೆರೆಯಿಂದ ಅಕ್ಕಿ, ಶಿವಮೊಗ್ಗದಿಂದ ಅಡಕೆ ತಟ್ಟೆ, ಬೆಳಗಾವಿ ಜಿಲ್ಲೆ ವಿವಿಧ ಭಾಗಗಳಿಂದ ತರಕಾರಿ, ಅಡುಗೆ ಎಣ್ಣೆ ತರಿಸಲಾಗಿದೆ. ಸಾವಿರಾರು ಜನರಿಗೆ ಊಟ ಬಡಿಸಲು ಹಿರೇಮಠದ ಭಕ್ತರು, ಕನ್ನಡ ಅಭಿಮಾನಿಗಳು ಸ್ವಯಂ ಪ್ರೇರಣೆಯಿಂದ ಭಾಗವಹಿಸುತ್ತಿದ್ದಾರೆ. ಅಲ್ಲದೆ, ಮಹಾನಗರ ಪಾಲಿಕೆಯು ಹೋಳಿಗೆ ಊಟ ತಯಾರಿಸಲು ಕುಡಿಯುವ ನೀರು, ವಿದ್ಯುತ್, ಜನರು ಸರತಿ ಸಾಲಿನಲ್ಲಿ ನಿಂತು ಊಟ ಮಾಡಲು ಅನುಕೂಲವಾಗುವಂತೆ ಕೌಂಟರ್ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸುತ್ತಿರುವುದು ವಿಶೇಷ ಎನ್ನಲಾಗಿದೆ.
ಕರ್ನಾಟಕ ರತ್ನ ಅಪ್ಪು ಕೇಂದ್ರಬಿಂದು: ಕಳೆದ ವರ್ಷ ಕೋವಿಡ್ ಆತಂಕ ಹಾಗೂ ನಟ ಪುನೀತ್ ರಾಜ್‌ಕುಮಾರ ನಿಧನದಿಂದಾಗಿ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಕನ್ನಡ ಸಂಭ್ರಮ ಇಮ್ಮಡಿಗೊಂಡಿದ್ದು, ಕನ್ನಡಪರ ಸಂಘಟನೆಗಳು ಅದ್ದೂರಿ ಆಚರಣೆಗೆ ಸಿದ್ಧತೆ ಮಾಡಿಕೊಂಡಿವೆ. ಈ ಬಾರಿ ರಾಜ್ಯೋತ್ಸವದಲ್ಲಿ ನಟ ದಿ. ಪುನೀತ್ ರಾಜಕುಮಾರ ಕೇಂದ್ರ ಬಿಂದುವಾಗಿದ್ದು, ಕನ್ನಡ ಬಾವುಟ, ಧ್ವಜದಲ್ಲಿ ಪುನೀತ್ ಭಾವಚಿತ್ರಗಳೇ ರಾಜಾಜಿಸುತ್ತಿವೆ. ಅಲ್ಲದೆ, ಪುನೀತ್ ಟೀ ಶರ್ಟ್‌ಗಳನ್ನು ಗಲ್ಲಿ ಗಲ್ಲಿಗಳಲ್ಲಿ ವಿತರಣೆ ಮಾಡುತ್ತಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net