

ಬೆಳಗಾವಿ: ಜಿಲ್ಲೆಯ ಜನತೆಯ ಬಹುದಿನಗಳ ಬೇಡಿಕೆಗಳಲ್ಲಿ ಒಂದಾಗಿದ್ದ ಧಾರವಾಡ-ಮೈಸೂರು ರೈಲು ಸೇವೆಯನ್ನು ಬೆಳಗಾವಿ ವರೆಗೂ ವಿಸ್ತರಿಸಬೇಕು ಎಂಬ ಬೇಡಿಕೆ ಈಗ ಈಡೇರಿದೆ. ಧಾರವಾಡ-ಮೈಸೂರು ಏಕ್ಸಪ್ರೆಸ್ ರೈಲನ್ನು ಬೆಳಗಾವಿಯವರೆಗೆ ವಿಸ್ತರಣೆ ಮಾಡಿ ರೈಲ್ವೆ ಸಚಿವಾಲಯ ಆದೇಶ ನೀಡಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಈರಣ್ಣ ಕಡಾಡಿ ಅವರು, ಮೈಸೂರಿಗೆ ತೆರಳುವ ರೈಲು ಸಂಖ್ಯೆ 17302 ಬೆಳಗಾವಿಯಿಂದ ರಾತ್ರಿ 07.45 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 07.10 ಕ್ಕೆ ಮೈಸೂರಿಗೆ ತಲುಪಲಿದೆ.
ರೈಲು ಸಂಖ್ಯೆ 17301 ಮೈಸೂರಿನಿಂದ ರಾತ್ರಿ 10.30 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 10.45 ಗಂಟೆಗೆ ಬೆಳಗಾವಿಗೆ ತಲುಪಲಿದೆ. ಈ ತಿಂಗಳ ಕೊನೆಯ ವಾರದಲ್ಲಿ ಬೆಳಗಾವಿ-ಮೈಸೂರು ಏಕ್ಸಪ್ರೆಸ್ ರೈಲು ತನ್ನ ಸಂಚಾರ ಆರಂಭಿಸಲಿದೆ ಎಂದರು. ಬೆಳಗಾವಿ-ಮೈಸೂರು ಏಕ್ಸಪ್ರೆಸ್ ರೈಲು ಪ್ರಾರಂಭಿಸಲು ಅನುಮತಿ ನೀಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಕಡಾಡಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.