

ಬೆಳಗಾವಿ: ಎರಡನೇ ರಾಜಧಾನಿ ಹಣೆಪಟ್ಟಿಯೊಂದಿಗೆ ಬೆಳಗಾವಿ ನಗರದಲ್ಲಿ ಸ್ವಚ್ಛತೆ ಸೇರಿ ಮೂಲ ಸೌಲಭ್ಯ ಮಾತ್ರ ನಗರದ ಬಹುತೇಕ ಕಡೆಗಳಲ್ಲಿ ಇನ್ನೂ ಮರೀಚಿಕೆಯಾಗಿದೆ. ಹೆಚ್ಚು ಜನ ವಸತಿ ಇರುವ ಪ್ರದೇಶಗಳಲ್ಲಿಯೇ ಅವ್ಯವಸ್ಥೆ ತಾಂಡವವಾಡುತ್ತಿದೆ.
ಹಾಳಾದ ರಸ್ತೆ: ಹಲವು ಕಡೆ ರಸ್ತೆಯ ಡಾಂಬರ್ ಕಿತ್ತು ತಗ್ಗು-ಗುಂಡಿಗಳು ನಿರ್ಮಾಣವಾಗಿದ್ದರೆ, ಇನ್ನೊಂದೆಡೆ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿವೆ. ಕಸ, ಮಣ್ಣಿನಿಂದ ತುಂಬಿಹೋಗಿರುವ ಚರಂಡಿಯನ್ನು ಇನ್ನೂ ಸ್ವಚ್ಛಗೊಳಿಸಿಲ್ಲ. ಹಾಗಂತ ಇದು ಇಂದು ನಿನ್ನೆಯ ಸಮಸ್ಯೆಯಲ್ಲ. 2024-25ನೇ ಸಾಲಿನಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯು ಶೇ.3ರಷ್ಟು ಆಸ್ತಿಕರ ಹೆಚ್ಚಳ ಮಾಡಿದ್ದು, ಕಡ್ಡಾಯವಾಗಿ ತೆರಿಗೆ ಪಾವತಿಸಿಕೊಳ್ಳುತ್ತಿದೆ. ಆದರೆ, ಅದಕ್ಕೆ ತಕ್ಕ ಸೇವೆ ಮಾತ್ರ ನಿವಾಸಿಗಳಿಗೆ ಸಿಗುತ್ತಿಲ್ಲ. ತೆರಿಗೆ ಕಟ್ಟೋದು ಮರಿಬೇಡಿ. ಸ್ವಚ್ಛತೆ ಮಾತ್ರ ಕೇಳಬೇಡಿ ಅನ್ನೋ ಹಾಗಾಗಿದೆ ಪರಿಸ್ಥಿತಿ.
ಪ್ರಶ್ನೆಗಳೇ ಎಲ್ಲ ಉತ್ತರವೇ ಇಲ್ಲ: ರಾಣಿ ಚನ್ನಮ್ಮ ನಗರ, ವಡಗಾಂವಿ, ಶಹಾಪುರ, ಹಳೇ ಪಿಬಿ ರಸ್ತೆ ಪ್ರದೇಶ, ಗಾಂಧಿನಗರ, ಹನುಮಾನ ನಗರ, ಮಹಾಂತೇಶ ನಗರ, ರಾಮತೀರ್ಥ ನಗರ, ನೆಹರುನಗರ ಸೇರಿ ವಿವಿಧ ಅವ್ಯವಸ್ಥಿತ ರಸ್ತೆ, ಚರಂಡಿಗಳ ದುರಸ್ತಿ ಕುರಿತು ದೂರು, ಮನವಿಗಂತೂ ಉತ್ತರವೇ ಇಲ್ಲ ಎನ್ನುವುದು ಇಲ್ಲಿನ ನಿವಾಸಿಗಳ ಆಕ್ರೋಶ. ಇನ್ನು ಪಾಲಿಕೆಯ 58 ವಾರ್ಡ್‌ಗಳ ವ್ಯಾಪ್ತಿಯ ಬಹುತೇಕ ಜನವಸತಿ ಪ್ರದೇಶಗಳಲ್ಲಿ ಚರಂಡಿಗಳು ಸ್ವಚ್ಛತೆ ಕಂಡಿಲ್ಲ.
ಕೆಲ ವಸತಿ ಪ್ರದೇಶಗಳಲ್ಲಿ ಯಾವಾಗಲೂ ನೀರು ನಿಂತಿಕೊಂಡಿರುವುದರಿಂದ ವಾಸನೆಯೂ ಹೆಚ್ಚಿದೆ. ನಗರದ ವಿವಿಧ ಕಡೆಗಳಲ್ಲಿರುವ ನಾಲಾಗಳಲ್ಲಿ ಸ್ವಚ್ಛತೆ ಇಲ್ಲದೆ ಗಬ್ಬೆದ್ದು ನಾರುತ್ತಿವೆ. ಕೊಳಚೆ ನೀರು ನಿರಂತರವಾಗಿ ಹರಿಯಿತ್ತಿದೆ. ಕೆಲ ಭಾಗದಲ್ಲಿ ಉದ್ಯಾನದಲ್ಲಿ ಕೊಳಚೆ ನೀರು ನಿಲ್ಲುವುದರಿಂದ ಆಟ ಆಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಿವಾಸಿಗಳು ದೂರಿದ್ದಾರೆ.
ನಗರದ ಹಳೇ ಪಿಬಿ ರಸ್ತೆ ಪ್ರದೇಶ, ಗಾಂಧಿ ನಗರ, ಸಮರ್ಥ ನಗರ ಸೇರಿ ವಿವಿಧ ಭಾಗಗಳಲ್ಲಿನ ಚರಂಡಿಗಳು ಬ್ಲಾಕ್ ಆಗಿ ಬರೋಬ್ಬರಿ ಒಂದು ವರ್ಷ ಕಳೆದರೂ ದುರಸ್ತಿ ಮಾಡಿಲ್ಲ. ನಾಲಾಗಳು ಕುಸಿದು ಬಿದ್ದು ವ್ಯಾಪಾರಕ್ಕೆ ಸಮಸ್ಯೆ ಉಂಟು ಮಾಡಿದೆ.
| ರಾಹುಲ ಪಾಟೀಲ, ರಮೇಶ ಅನಗೋಳಕರ ಸಮರ್ಥ ನಗರ ನಿವಾಸಿ