

ಬೆಳಗಾವಿ: ಸ್ವಾತಂತ್ರೃಹೋರಾಟದಿಂದ ಹಿಡಿದು ರಾಜ್ಯದ ಇಂದಿನ ರಾಜಕೀಯ ಪವರ್‌ಹೌಸ್ ಎನಿಸಿಕೊಂಡಿರುವ ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಚರ್ಚೆ ದಿನೇ ದಿನೆ ಕಾವೇರುತ್ತಿದ್ದು, ಪರ-ವಿರೋಧ ಅಭಿಪ್ರಾಯ ಕೇಳಿಬರುತ್ತಿವೆ.
ಕರ್ನಾಟಕ-ಮಹಾರಾಷ್ಟ್ರ ಗಡಿ ನಿರ್ಣಯಕ್ಕೆ ಸಂಬಂಧಿಸಿದಂತೆ ಸುಮಾರು ಎರಡು ದಶಕಗಳಿಂದ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ನಾಡಿನ ಗಡಿ ಗುರುತಿಸಿಕೊಳ್ಳುವಲ್ಲಿ ಹಾಗೂ ಗಡಿಭಾಗದ ಅಭಿವೃದ್ಧಿಗೆ ತೋರದ ಆಸಕ್ತಿಯನ್ನು ರಾಜಕೀಯ ನಾಯಕರು ಜಿಲ್ಲಾ ವಿಭಜನೆಗೆ ತೋರುತ್ತಿರುವುದು ಕನ್ನಡಪರ ಹೋರಾಟಗಾರರ ಆಕ್ರೋಶಕ್ಕೆ ಗುರಿಯಾಗಿದೆ.
ರಾಜ್ಯದ ಅತಿ ದೊಡ್ಡ ಜಿಲ್ಲೆ ಎಂಬ ಹೆಗ್ಗಳಿಕೆ ಜತೆಗೆ ವರ್ಷದಿಂದ ವರ್ಷಕ್ಕೆ ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ಪ್ರಭಾವಿ ಜಿಲ್ಲೆಯಾಗಿ ಬೆಳೆಯುತ್ತಿದೆ. ಈಗಾಗಲೇ ಉತ್ತರ ಕರ್ನಾಟಕದಲ್ಲೇ ರಾಜಕೀಯವಾಗಿ ಅತ್ಯಂತ ಬಲಾಢ್ಯ ಜಿಲ್ಲೆಯಾಗಿ ಬೆಳಗಾವಿ ಬೆಳೆದು ನಿಂತಿದೆ. ಹೀಗಿರುವಾಗ ಬಳ್ಳಾರಿಯಂತೆ ಇದೂ ವಿಭಜನೆಯಾದರೆ, ರಾಜ್ಯಮಟ್ಟದಲ್ಲಿ ಈ ಭಾಗಕ್ಕೆ ಸಲ್ಲಬೇಕಾದ ಸಮಾನತೆಯನ್ನು ಧೈರ್ಯದಿಂದ ಕೇಳುವ ಶಕ್ತಿ ಕಳೆದುಕೊಂಡಂತಾಗುತ್ತದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಆದರೆ, ಪ್ರತಿ ಬಾರಿ ಚುನಾವಣೆ ಬಂದಾಗಲೂ ಜಿಲ್ಲಾ ವಿಭಜನೆ ವಿಚಾರ ರಾಜಕಾರಣಿಗಳಿಗೆ ದಾಳವಾಗುತ್ತಿದ್ದು, ಈ ಬಾರಿಯೂ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ಜಿಲ್ಲೆ ವಿಭಜನೆ ಕೂಗು ಮತ್ತೆ ಮುನ್ನಲೆಗೆ ಬಂದಿದೆ. ಬೆಳಗಾವಿ ಅಖಂಡ ಜಿಲ್ಲೆ ಇರುವಾಗಲೇ ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನೆ ಸತತವಾಗಿ ಗಲಾಟೆ ಮಾಡುತ್ತ ರಾಜ್ಯದ ಗಡಿಭಾಗಗಳನ್ನು ಕಬಳಿಸಲು ಪ್ರಯತ್ನಿಸುತ್ತಿವೆ. ಹೀಗಿರುವಾಗ ಕನ್ನಡಿಗರಿಗಿಂತ ಮರಾಠಿ ಭಾಷಿಕರ ಸಂಖ್ಯೆಯೇ ಹೆಚ್ಚಾಗುವಂತೆ ಬೆಳಗಾವಿ ಜಿಲ್ಲೆ ಎಂದು ವಿಭಜಿಸಿದರೆ ನಾಡಿಗೆ ಒಳ್ಳೆಯದಾಗುತ್ತದೆಯೇ ಶ್ರೇಯಸ್ಸು ಎಂದು ಕನ್ನಡಪರ ಚಿಂತಕರು ಪ್ರಶ್ನಿಸುತ್ತಿದ್ದಾರೆ.
ವಿಭಜನೆ ಅನಿವಾರ್ಯತೆ: 50 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಬೆಳಗಾವಿಯಲ್ಲಿ 18 ಶಾಸಕರು, ಮೂವರು ಸಂಸದರು, 33 ನಗರ ಸ್ಥಳೀಯ ಸಂಸ್ಥೆಗಳು, 90 ಜಿಪಂ ಹಾಗೂ 245 ತಾಪಂ ಕ್ಷೇತ್ರಗಳಿದ್ದು, 500ಕ್ಕೂ ಅಧಿಕ ಗ್ರಾಪಂಗಳಿವೆ. ಬೆಳಗಾವಿ, ಚಿಕ್ಕೋಡಿ ಹಾಗೂ ಬೈಲಹೊಂಗಲ ಎಂದು ಮೂರು ಉಪವಿಭಾಗಗಳಾಗಿ ಜಿಲ್ಲಾಡಳಿತದಿಂದ ಆಡಳಿತ ನಡೆಯುತ್ತಿದೆ. ಆದರೆ, ಕಾಗವಾಡ, ಅಥಣಿ ಸೇರಿ ಗಡಿ ತಾಲೂಕಿನ ಜನ ಜಿಲ್ಲಾ ಕೇಂದ್ರಸ್ಥಾನಕ್ಕೆ ಬರಲು 200ಕ್ಕೂ ಅಧಿಕ ಕಿ.ಮೀ. ದೂರ ಕ್ರಮಿಸಬೇಕಿರುವುದು ದೊಡ್ಡ ಸಮಸ್ಯೆಯಾಗಿದೆ. ಆಯಾ ಪ್ರದೇಶಗಳಲ್ಲೇ ಪ್ರಮುಖ ಕಚೇರಿಗಳು ಕಾರ್ಯಾರಂಭಗೊಂಡು ಅಧಿಕಾರಿಗಳು ಲಭ್ಯವಾದರೆ ಸರ್ಕಾರಿ ಯೋಜನೆಗಳ ಸೌಲಭ್ಯಗಳು ಸಕಾಲಕ್ಕೆ ದೊರಕುತ್ತವೆ ಎಂಬ ಲೆಕ್ಕಾಚಾರದಿಂದ ಬೆಳಗಾವಿ ಜಿಲ್ಲೆ ವಿಭಜನೆಗೆ ದಶಕಗಳಿಂದ ಹೋರಾಟ ನಡೆದಿದೆ.
ಬೆಳಗಾವಿ ಜಿಲ್ಲೆಯ ಅಖಂಡತೆಗಾಗಿ ಸಾಕಷ್ಟು ವರ್ಷಗಳಿಂದ ಹೋರಾಟ ನಡೆಸುತ್ತಿದ್ದು ಈಗ ಮತ್ತೆ ಜಿಲ್ಲಾ ವಿಭಜನೆ ಕೂಗು ಕೇಳಿ ಬಂದಿದ್ದು, ಈ ಕುರಿತು ಏ. 9ರಂದು ಸಂಜೆ 5 ಗಂಟೆಗೆ ಪಟ್ಟಣದ ಶಾಖಾ ಮೂರುಸಾವಿರಮಠದಲ್ಲಿ ಜಿಲ್ಲಾ ವಿಭಜನೆ ಕುರಿತು ಪೂರ್ವಭಾವಿ ಸಭೆ ಕರೆಯಲಾಗಿದೆ. ಜಿಲ್ಲಾ ವಿಭಜನೆ ಹೋರಾಟ ಸಮಿತಿಯ ಎಲ್ಲ ಪದಾಧಿಕಾರಿಗಳು ಎಲ್ಲ ಸಂಘಟನೆಗಳು, ಹಿರಿಯರು, ಎಲ್ಲ ಪಕ್ಷದ ಮುಖಂಡರು ಭಾಗವಹಿಸಬೇಕೆಂದು ಸಮಿತಿಯ ಅಧ್ಯಕ್ಷ ಶಿವರಂಜನ ಬೋಳನ್ನವರ ಕೋರಿದ್ದಾರೆ. ಹೋರಾಟ ಸಮಿತಿಯ ಮುಖಂಡ ಮಹಾಂತೇಶ ತುರಮರಿ ಮಾತನಾಡಿ, ಅಖಂಡ ಜಿಲ್ಲೆಗೆ ಹೋರಾಟ ನಡೆಸುತ್ತಿದ್ದೇವೆ. ಆಡಳಿತಾತ್ಮಕ ದೃಷ್ಟಿಯಿಂದ ಸರ್ಕಾರ ಜಿಲ್ಲೆ ವಿಭಜನೆ ಮಾಡುವದಾದರೆ ಉಪವಿಭಾಗ ಕೇಂದ್ರವಾದ ಬೈಲಹೊಂಗಲ ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಮತ್ತೆ ಹೋರಾಟ ಸಮಿತಿ ಸಜ್ಜಾಗಿದೆ ಎಂದರು.
ಜಿಲ್ಲೆ ವಿಭಜನೆಯಾದರೆ ರಾಜ್ಯ ಗಡಿ ನಿರ್ಣಯಕ್ಕೆ ಅಪಾಯಕಾರಿ. ಗಡಿ ಸಮಸ್ಯೆ ಇತ್ಯರ್ಥ ಆಗುವವರೆಗೂ ವಿಭಜನೆ ಬೇಡ ಎಂಬುದು ನಮ್ಮ ದೃಢ ನಿಲುವು. ಇದೇ ನಿರ್ಧಾರ ತೆಗೆದುಕೊಂಡ ಜೆ.ಎಚ್.ಪಟೇಲ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರೇ ಇದೀಗ ಮುಖ್ಯಮಂತ್ರಿಯಾಗಿದ್ದಾರೆ. ಈ ಬಗ್ಗೆ ಪೂರ್ಣ ಜ್ಞಾನ ಇರುವ ಬೊಮ್ಮಾಯಿ ಅವರು ಜಿಲ್ಲೆಯ ನಾಯಕರ ರಾಜಕೀಯಕ್ಕಾಗಿ ರಾಜ್ಯದ ಹಿತಾಸಕ್ತಿ ಬಲಿಕೊಡುವುದಿಲ್ಲ ಎಂಬ ವಿಶ್ವಾಸವಿದೆ.| ಅಶೋಕ ಚಂದರಗಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಕ್ರಿಯಾಸಮಿತಿ ಅಧ್ಯಕ್ಷ
| ರವಿ ಗೋಸಾವಿ ಬೆಳಗಾವಿ