

ಬೆಳಗಾವಿ: ತನ್ನ ಅಧಿಕಾರಿಗಳು, ಸಿಬ್ಬಂದಿ ಮೇಲಿನ ಕೆಲಸ ಒತ್ತಡ ಕಡಿಮೆ ಮಾಡಲು ವಿನೂತನ ಪ್ರಯೋಗಕ್ಕೆ ಮುಂದಾಗಿರುವ ಬೆಳಗಾವಿ ಜಿಲ್ಲಾ ಪಂಚಾಯಿತಿ ತನ್ನ ಕಚೇರಿ ಆವರಣದಲ್ಲೇ ಗ್ರಂಥಾಲಯ ಹಾಗೂ ಚದುರಂಗ (ಚೆಸ್ ಗೇಮ್) ಆಟದ ವ್ಯವಸ್ಥೆ ಮಾಡಿದೆ.
ಬೆಳಗಾವಿ ಜಿಪಂ ವ್ಯಾಪ್ತಿಯಲ್ಲಿ 480 ಗ್ರಾಪಂಗಳು ಕಾರ್ಯನಿರ್ವಹಿಸುತ್ತಿವೆ. ನಿತ್ಯ ಕೆಲಸದ ನಿಮಿತ್ತ ದೂರದ ಊರುಗಳಿಗೆ ಸಾರ್ವಜನಕರು ಜಿಪಂ ಕೇಂದ್ರ ಕಚೇರಿಗೆ ಬರುತ್ತಾರೆ. ಇದರಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತೀವ್ರ ಕೆಲಸದ ಒತ್ತಡವಾಗುತ್ತಿರುವುದನ್ನು ಗಮನಿಸಿದ ಜಿಪಂ ತನ್ನ ಕಚೇರಿ ಆವರಣದಲ್ಲೇ ಈ ವ್ಯವಸ್ಥೆ ಮಾಡಿದೆ. ಬಿಡುವಿನ ವೇಳೆಯಲ್ಲಿ ಗ್ರಂಥಾಲಯದಲ್ಲಿನ ಪುಸ್ತಕಗಳನ್ನು ಓದಿ ಒತ್ತಡ ಕಡಿಮೆ ಮಾಡಿಕೊಳ್ಳಬಹುದಾಗಿದೆ. ಜತೆಗೆ ಚೆಸ್ ಕೂಡ ಆಡಬಹುದಾಗಿದೆ.
ಸಾರ್ವಜನಿಕರಿಗೂ ಪ್ರಯೋಜನ: ಅಧಿಕಾರಿಗಳು ಬರುವವರೆಗೆ ಅಥವಾ ತಮ್ಮ ಕೆಲಸ ಆಗುವವರೆಗೆ ಸಾರ್ವಜನಿಕರು ಸಹ ಗ್ರಂಥಾಲಯದಲ್ಲಿರುವ ವಿವಿಧ ಪುಸ್ತಕ, ದಿನಪತ್ರಿಕೆಗಳನ್ನು ಓದುಬಹುದು. ಇಲ್ಲವೆ ಚೆಸ್ ಆಡಬಹುದು. ಇದರಿಂದ ಅವರಿಗೂ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂಬ ಉದ್ದೇಶ ಬೆಳಗಾವಿ ಜಿಲ್ಲಾ ಪಂಚಾಯಿತಿಯದ್ದಾಗಿದೆ. ಈಗಾಗಲೇ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಗ್ರಾಪಂಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೈಟೆಕ್ ಗ್ರಂಥಾಲಯ ನಿರ್ಮಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಚೆಸ್ ಸೇರಿ ವಿವಿಧ ಕ್ರೀಡಾ ಸಾಮಗ್ರಿ ಸೌಲಭ್ಯ ಕಲ್ಪಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕಾಗಿ ವಾರ್ಷಿಕ 40ರಿಂದ 50 ಲಕ್ಷ ರೂ. ವರೆಗೆ ಖರ್ಚು ಮಾಡುತ್ತಿದೆ. ಗ್ರಾಪಂ, ತಾಪಂ ಕಚೇರಿ ಆವರಣದಲ್ಲಿ ಚೆಸ್‌ನಂತ ಕ್ರೀಡಾ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಜಿಪಂ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಪ್ರಧಾನ ಕಚೇರಿಗಳಲ್ಲಿ ಶಿಶುಪಾಲನ ಕೇಂದ್ರ ಹಾಗೂ ಮಹಿಳಾ ವಿಶ್ರಾಂತಿ ಗೃಹಗಳನ್ನು ಸ್ಥಾಪಿಸಲು ಕೊಠಡಿ ಇಲ್ಲದಿರುವ ಕಡೆ ಹೊಸದಾಗಿ ಕೊಠಡಿ ನಿರ್ಮಿಸಲಾಗುತ್ತದೆ. ಇಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಶೌಚಗೃಹ, ಕುಡಿಯುವ ನೀರು, ಕುರ್ಚಿಗಳ ವ್ಯವಸ್ಥೆ ಮಾಡಲಾಗುತ್ತಿದೆ. ಮಕ್ಕಳಿದ್ದರೆ ಅವರಿಗೆ ಆಟಿಕೆ ಸಾಮಗ್ರಿ, ತೊಟ್ಟಿಲು, ಹಾಸಿಗೆ, ಹೊದಿಕೆ ಸೌಲಭ್ಯ ಕಲ್ಪಿಸಿಕೊಡಲಾಗುತ್ತಿದೆ. ಇದಕ್ಕಾಗಿ ಸುಮಾರು 15 ಲಕ್ಷ ರೂ. ವರೆಗೆ ಖರ್ಚು ಮಾಡಲಾಗುತ್ತಿದೆ. ಹಳೆಯ ಕೊಠಡಿ ಲಭ್ಯವಿದ್ದರೆ ಮಾತ್ರ 2ರಿಂದ 3 ಲಕ್ಷ ರೂ. ವರೆಗೆ ವೆಚ್ಚವಾಗಲಿದೆ ಎಂದು ಆರ್‌ಡಿಪಿಆರ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜಿಪಂ ಕೇಂದ್ರ ಕಚೇರಿ ಆವರಣದಲ್ಲಿ ಚೆಸ್ ಗೇಮ್, ಗ್ರಂಥಾಲಯ, ಮಹಿಳಾ ಸಿಬ್ಬಂದಿ ವಿಶ್ರಾಂತಿಗೆ ಪ್ರತ್ಯೇಕ ಕೊಠಡಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ನೌಕರರು ತಮ್ಮ ಕೆಲಸದ ಬಿಡುವಿನ ಸಮಯದಲ್ಲಿ ಚೆಸ್ ಆಡುವುದು, ಪುಸ್ತಕಗಳನ್ನು ಓದುತ್ತಾರೆ. ಕಚೇರಿಗಳಿಗೆ ಬರುವ ಸಾರ್ವಜನಿಕರೂ ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.| ದರ್ಶನ್ ಎಚ್.ವಿ. ಜಿಪಂ ಸಿಇಒ
|ಮಂಜುನಾಥ ಕೋಳಿಗುಡ್ಡ ಬೆಳಗಾವಿ