ಬೆಳಗಾವಿ-ಗೋವಾ ಸಂಚಾರ ಸುಗಮ

HBL_2Goa3
Published on

ಪಣಜಿ: ಬೆಳಗಾವಿ-ಚೋರ್ಲಾ-ಗೋವಾ ಹೆದ್ದಾರಿಯ ಕುಸಮಳಿ ಸೇತುವೆಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಜು.1 ರಿಂದ ವಾಹನ ಓಡಾಟಕ್ಕೆ ಮುಕ್ತಗೊಳಿಸಲಾಗಿದೆ. ಸದ್ಯ ಸೇತುವೆಯ ಮೇಲೆ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಮಾತ್ರ ಓಡಾಟಕ್ಕೆ ಅನುವು ಮಾಡಿಕೊಡಲಾಗಿದ್ದು, ಭಾರಿ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ.

ಭಾರಿ ವಾಹನಗಳ ಓಡಾಟಕ್ಕೆ ಖಾನಾಪುರ- ಬೆಳಗಾವಿ ಬದಲಿ ಮಾರ್ಗ ಸೂಚಿಸಲಾಗಿದೆ. ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕುಸಮಳಿ ಸೇತುವೆಯ ಸಣ್ಣಪುಟ್ಟ ಕಾಮಗಾರಿಗಳು ಇನ್ನೂ ಬಾಕಿ ಇದೆ. ಅವು ಪೂರ್ಣಗೊಂಡ ನಂತರ ಭಾರಿ ವಾಹನಗಳ ಓಡಾಟಕ್ಕೂ ಅವಕಾಶ ಲಭಿಸಲಿದೆ.

ಕುಸಮಳಿಯಲ್ಲಿ ಬ್ರಿಟಿಷ್ ಕಾಲದಲ್ಲಿ ನಿರ್ಮಿಸಿದ್ದ ಸೇತುವೆ ಹಾಳಾಗಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹೊಸ ಸೇತುವೆ ನಿರ್ಮಿಸಲಾಗಿದೆ. ನೂತನ ಸೇತುವೆಯು 10 ಮೀಟರ್ ಉದ್ದ ಹಾಗೂ ಐದೂವರೆ ಮೀಟರ್ ಅಗಲವಿದೆ.

ಸೇತುವೆಯ ನಿರ್ಮಾಣ ಸಂದರ್ಭದಲ್ಲಿ ಪಕ್ಕದಲ್ಲಿ ವಾಹನ ಸಂಚಾರಕ್ಕೆ ನದಿಗೆ 10 ಪೈಪ್ ಹಾಕಿ ಮಣ್ಣಿನ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ, ಹದಿನೈದು ದಿನಗಳ ಹಿಂದೆ ಭಾರಿ ಮಳೆಗೆ ಈ ತಾತ್ಕಾಲಿನ ಮಣ್ಣಿನ ಸೇತುವೆ ಕೊಚ್ಚಿ ಹೋಗಿತ್ತು. ಇದರಿಂದಾಗಿ ಈ ಮಾರ್ಗದಲ್ಲಿ ಕೆಲದಿನಗಳಿಂದ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಇದೀಗ ಈ ಮುಖ್ಯ ಸೇತುವೆಯ ನಿರ್ಮಾಣ ಕಾರ್ಯ ಪೂರ್ಣಗೊಂಡಿರುವುದರಿಂದ ಬೆಳಗಾವಿ-ಗೋವಾ ವಾಹನ ಸಂಚಾರ ಸುಗಮಗೊಂಡಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net