

ಸೋಮವಾರಪೇಟೆ: ಮುಂಗಾರಿನಲ್ಲಿ ಸುರಿದ ಧಾರಾಕಾರ ಮಳೆ ಮತ್ತು ನಂತರದ ಅಕಾಲಿಕ ಮಳೆಯಿಂದ ಕೃಷಿಕರಿಂದ ಕಪ್ಪು ಚಿನ್ನ ಎಂದೇ ಕರೆಸಿಕೊಳ್ಳುವ ಕಾಳುಮೆಣಸು ಬೆಳೆ ಕೈಕೊಟ್ಟಿದೆ.
ಕಳೆದ ವರ್ಷ ಒಣಗಿದ ಕಾಳುಮೆಣಸು ಕೆ.ಜಿ.ಗೆ 500 ರೂ.ಗಳಿಗೆ ಮಾರಾಟವಾಗಿತ್ತು. ಪ್ರಸಕ್ತ ವರ್ಷ ಬೆಲೆ 485 ರೂ.ಗಳಿಗೆ ಇಳಿದಿದೆ. ಉತ್ಪಾದನಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆ ಕೆ.ಜಿ.ಗೆ 800 ರೂ.ಗಳ ಬೆಲೆ ಸಿಕ್ಕರೆ ಮಾತ್ರ ಕಾಳೆಮೆಣಸು ಬೆಳೆಗಾರ ಆದಾಯ ನಿರೀಕ್ಷೆ ಮಾಡಬಹುದು ಎನ್ನುತ್ತಾರೆ ಬೆಳೆಗಾರರು.
ಕಾಫಿ ಫಸಲು ಸಹ ಇಲ್ಲದೆ ಕಂಗಾಲಾಗಿದ್ದ ಬೆಳೆಗಾರರನ್ನು ಕಾಳುಮೆಣಸು ರಕ್ಷಿಸುತ್ತದೆ ಎಂಬ ನಂಬಿಕೆಯಿತ್ತು. ಆದರೆ ಕಾಳುಮೆಣಸಿಗೆ ಸೊರಗು ರೋಗ ಕಾಣಿಸಿಕೊಂಡು ಫಸಲು ಸಮೇತ ಬಳ್ಳಿಗಳು ಒಣಗಿ ಹೋಗುತ್ತಿವೆ. ಅಲ್ಪಸ್ವಲ್ಪ ಇದ್ದ ಫಸಲು ನಷ್ಟವಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 5,500 ಹೆಕ್ಟೇರ್ ಪ್ರದೇಶದಲ್ಲಿ ಕಾಳುಮೆಣಸು ಬೆಳೆಯಲಾಗುತ್ತಿದೆ. ಕೃಷಿಕರು ಅತಿ ಹೆಚ್ಚು ಕಾಳಜಿ ವಹಿಸಿ ಬೆಳೆಯುವ ಬೆಳೆ ಇದಾಗಿದೆ. ಆದರೆ ಪ್ರಸಕ್ತ ವರ್ಷ ಧಾರಾಕಾರ ಮಳೆ ಸುರಿದಿದ್ದು, ಕಾಳುಮೆಣಸು ಬಳ್ಳಿಗಳು ರೋಗಪೀಡಿತವಾಗಿದ್ದವು. ಈಗ ಬಿಸಿಲು ಬರುತ್ತಿದ್ದಂತೆ ಸೊರಗು ರೋಗ ಆರೋಗ್ಯವಂತ ಬಳ್ಳಿಗಳಿಗೂ ಹರಡುತ್ತಿದ್ದು, ಫಸಲು ನಷ್ಟದ ಭೀತಿ ಬೆಳೆಗಾರರಿಗೆ ಎದುರಾಗಿದೆ.
ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಕಾಳುಮೆಣಸು ಕೊಯ್ಲು ಮಾಡಬೇಕಾಗಿದ್ದು, ಈಗಾಗಲೇ ರೋಗಪೀಡಿತ ಬಳ್ಳಿಗಳಲ್ಲಿ ಎಲೆ ಮತ್ತು ಕಾಳುಮೆಣಸು ಉದುರುತ್ತಿವೆ. ಕೆಲ ಬಳ್ಳಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಹವಾಮಾನ ವೈಪರೀತ್ಯದ ನಡುವೆ ಕಾಳುಮೆಣಸು ಬಳ್ಳಿಗಳನ್ನು ನೆಟ್ಟು ಅರೈಕೆ ಮಾಡಿ, ನಾಲ್ಕೈದು ವರ್ಷಗಳ ನಂತರ ಫಸಲು ಕೊಯ್ಲು ಮಾಡುವ ಹೊತ್ತಿಗೆ ಕೃಷಿಕರು ಹೆಚ್ಚು ಹಣ ಮತ್ತು ಶ್ರಮ ವಹಿಸಿರುತ್ತಾರೆ. ಫಸಲು ಕೈಸೇರುವ ಹೊತ್ತಿಗೆ ಕಾಯಿಲೆ ಕಾಣಿಸಿಕೊಂಡಿದೆ. ರೋಗ ಹತೋಟಿಗೆ ಶ್ರಮವಹಿಸಿದರೂ, ಪ್ರಯೋಜನವಾಗುತ್ತಿಲ್ಲ ಎಂದು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.
ಆರೋಗ್ಯವಂತ ಕಾಳುಮೆಣಸಿನ ಬಳ್ಳಿಗಳಿಗೆ ರೋಗ ಹರಡುತ್ತಿದೆ. ದಿನದಿಂದ ದಿನಕ್ಕೆ ಹೆಚ್ಚೆಚ್ಚು ಬಳ್ಳಿಗಳು ಸಾಯುತ್ತಿವೆ. ಬಳ್ಳಿಗಳು ಮತ್ತು ಫಸಲನ್ನು ರಕ್ಷಿಸಿಕೊಳ್ಳುವುದು ಕಷ್ಟವಾಗಿದೆ. ಕೃಷಿ ವಿಜ್ಞಾನಿಗಳು ರೋಗಮುಕ್ತ ತಳಿಗಳನ್ನು ಸಂಶೋಧನೆ ಮಾಡಬೇಕಾಗಿದೆ ಎಂದು ಪ್ರಗತಿಪರ ಕೃಷಿಕ ದೊಡ್ಡಮಳ್ತೆ ಪೂವಯ್ಯ ಹೇಳಿದರು.
ಶಾಂತಳ್ಳಿ ಹೋಬಳಿಯ ಶಾಂತಳ್ಳಿ, ಕುಂದಳ್ಳಿ, ತೋಳೂರುಶೆಟ್ಟಳ್ಳಿ, ಕುಮಾರಳ್ಳಿ ಬಾಚಳ್ಳಿ, ಹರಗ, ಬೆಟ್ಟದಳ್ಳಿ, ಕೊತ್ನಳ್ಳಿ, ಕುಡಿಗಾಣ, ಹೆಗ್ಗಡಮನೆ, ತಾಕೇರಿ, ಕಿರಗಂದೂರು, ಬಿಳಿಗೇರಿ, ಸುಂಠಿಕೊಪ್ಪ ಹೋಬಳಿಯ ಗರ್ವಾಲೆ, ಸೂರ್ಲಬ್ಬಿ, ಮೂವತ್ತೊಕ್ಲು ಗ್ರಾಮಗಳಲ್ಲಿ ಮಳೆಗಾಲದಲ್ಲೇ ಕಾಳುಮೆಣಸು ಕೊಳೆರೋಗಕ್ಕೆ ತುತ್ತಾಗಿ, ಫಸಲು ಹಾನಿಯಾಗಿದೆ.
ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ ಕಸಬಾ ಹೋಬಳಿಗಳ ಹೆಚ್ಚಿನ ಗ್ರಾಮಗಳಲ್ಲಿ ಕಾಳುಮೆಣಸು ಫಸಲು ಚೆನ್ನಾಗಿತ್ತು. ನೀರಾವರಿ ಸೌಲಭ್ಯವಿದ್ದವರು ಬೇಸಿಗೆಯಲ್ಲಿ ಬಳ್ಳಿಗೆ ನೀರು ಕೊಟ್ಟು ಫಸಲು ಉಳಿಸಿಕೊಂಡಿದ್ದರು. ಆದರೆ ಈಗ ರೋಗಬಾಧೆ ಹಾಗೂ ಬೆಲೆ ಇಲ್ಲದಿರುವುದರಿಂದ ಕೃಷಿಕರು ನಷ್ಟದ ಹಾದಿಯಲ್ಲಿದ್ದು, ಮತ್ತೊಮ್ಮೆ ಆರ್ಥಿಕ ಸಂಕಷ್ಟ ಎದುರಿಸಬೇಕಾಗಿದೆ.
ತಾಲೂಕಿನ ಬಹುತೇಕ ಬೆಳೆಗಾರರು ಕಾಫಿ ತೋಟದೊಳಗೆ ನೆರಳಿಗಾಗಿ ಬೆಳೆದಿರುವ ಮರಗಳಿಗೆ ಕಾಳುಮೆಣಸು ಬಳ್ಳಿಗಳನ್ನು ಹಬ್ಬಿಸಿ, ಫಸಲು ತೆಗೆಯುತ್ತಿದ್ದರು. ಕೆಲವು ವರ್ಷ ಉತ್ತಮ ಫಸಲಿನೊಂದಿಗೆ, ತೃಪ್ತಿಕರ ಬೆಲೆ ಸಿಗುತ್ತಿದ್ದ ಪರಿಣಾಮ ಕಾಫಿ ಬೆಳೆಗಾರರು ಆರ್ಥಿಕವಾಗಿ ಸಬಲರಾಗಿದ್ದರು. ಕಾಫಿಗೆ ಬೆಲೆ ಇಲ್ಲದ ಸಮಯದಲ್ಲಿ ಕಾಳುಮೆಣಸು ಕೃಷಿಕರನ್ನು ರಕ್ಷಿಸಿತ್ತು.
ಹೀಗಾಗಿ ಕಾಳುಮೆಣಸು ಕೃಷಿ ನಿರ್ವಹಣೆಗಾಗಿ ಹೆಚ್ಚಿನ ಹಣವನ್ನು ವಿನಿಯೋಗಿಸಲಾಗುತ್ತಿದೆ. ಬಳ್ಳಿಗಳು ಸಮೃದ್ಧವಾಗಿ ಬೆಳೆಯಬೇಕು, ರೋಗಮುಕ್ತವಾಗಿರಬೇಕು ಎಂಬ ಹಂಬಲದಿಂದ ವೈಜ್ಞಾನಿಕ ನಿರ್ವಹಣೆಗೆ ಹೆಚ್ಚಿನ ಹಣ ಅಗತ್ಯವಿರುತ್ತದೆ. ಪ್ರಗತಿಪರ ಕೃಷಿಕರ ಕಾಫಿ ತೋಟದಲ್ಲಿ ರೋಗಮುಕ್ತವಾಗಿ ಬೆಳೆದಿದ್ದ ಕಾಳುಮೆಣಸಿನ ಬಳ್ಳಿಗಳಿಗೂ ರೋಗಬಾಧೆ ಕಾಡಲಾರಂಭಿಸುವುದರಿಂದ ಕೃಷಿಯ ಬಗ್ಗೆ ಆಸಕ್ತಿ ಕಳೆದುಕೊಳ್ಳುವವರಂತೆ ಅವರು ಮಾತನಾಡುತ್ತಿದ್ದಾರೆ.