ಬೆಳಗಟ್ಟಿ ಜನರಿಗೆ ತಪ್ಪದ ನರಕಯಾತನೆ

18srt-1
Published on

ಶಿರಹಟ್ಟಿ: ರಸ್ತೆ ಮೇಲೆ ಸತತವಾಗಿ ಹರಿಯುವ ಕೊಳಚೆ ನೀರು, ಮಳೆಯಿಂದ ಕೆಸರುಗದ್ದೆಯಂತಾದ ರಸ್ತೆ. ಎಲ್ಲಿ ನೋಡಿದರಲ್ಲಿ ಕಸದ ರಾಶಿ... ಇದು ತಾಲೂಕಿನ ಬೆಳಗಟ್ಟಿ ಗ್ರಾಮದ ಡೊಂಬರ, ದಲಿತ ಕೇರಿಯ ವಾಸ್ತವ ಚಿತ್ರಣ. ಇಲ್ಲಿನ ನಿವಾಸಿಗಳು ಸುತ್ತಲೂ ಗಲೀಜು ಇರುವ ಕಾರಣ ದುರ್ನಾತ ಹೆಚ್ಚಿ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಿ ನರಕಯಾತನೆ ಅನುಭವಿಸುವಂತಾಗಿದೆ.

ವಡವಿ ಗ್ರಾಪಂ ವ್ಯಾಪ್ತಿಯ ಬೆಳಗಟ್ಟಿ ಗ್ರಾಮ 1200 ಜನಸಂಖ್ಯೆ ಹೊಂದಿದೆ. ದೋಸೆ, ಪಡ್ಡಿನ ಹಂಚು ತಯಾರಿಕೆಗೆ ಪ್ರಸಿದ್ಧಿ ಪಡೆದಿದ್ದು, ಇಲ್ಲಿನ ಬಹುತೇಕ ಡೊಂಬರ ಜನಾಂಗದ ಕುಲಕಸುಬು ಕೂಡಾ ಇದೆ ಆಗಿದೆ. ದಲಿತ ಕೇರಿಯಿಂದ ಹರಿಯುವ ಕೊಳಚೆ ನೀರು ಪಕ್ಕದ ಡೊಂಬರ ಕೇರಿಗೆ ಹರಿಯುತ್ತದೆ. ಹೀಗಾಗಿ, ಮೂಗು ಮುಚ್ಚಿಕೊಂಡು ನಡೆಡಾಡುವ ಅನಿವಾರ್ಯತೆ ಎದುರಾಗಿದೆ.

ಅಲ್ಲದೆ, ತ್ಯಾಜ್ಯ, ಕಸದ ರಾಶಿ ವಿಲೇವಾರಿಯಾಗದೆ ಬೇಕಾಬಿಟ್ಟಿ ಬಿದ್ದಿವೆ. ಇದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಇಲ್ಲಿನ ಜನರು ರೋಸಿ ಹೋಗುವಂತೆ ಮಾಡಿದೆ.

ಪ್ರತಿಭಟನೆ ಎಚ್ಚರಿಕೆ

ಕೇರಿಗಳಲ್ಲಿ ಚರಂಡಿ ವ್ಯವಸ್ಥೆ ಹಾಗೂ ಸಂಚಾರ ರಸ್ತೆಗಳ ನಿರ್ವಣದ ಸಂಬಂಧ ಗ್ರಾಪಂಗೆ ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಸ್ಥಳೀಯವಾಗಿ ಮೂವರು ಸದಸ್ಯರಿದ್ದರೂ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯದಿರುವುದು ದೌರ್ಭಾಗ್ಯದ ಸಂಗತಿ. ನಿತ್ಯ ಸೊಳ್ಳೆಕಾಟ, ಕೊಳಚೆ ನೀರಿನ ದುರ್ನಾತದಿಂದ ಜೀವನ ನಡೆಸುವುದು ಕಷ್ಟವಾಗಿದೆ. ಕೂಡಲೇ, ಈ ಸಮಸ್ಯೆಗಳಿಗೆ ಪರಿಹಾರ ಒದಗಿಸದಿದ್ದರೆ ಗ್ರಾಪಂ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರಾದ ಸತ್ಯಪ್ಪ ಹರಿಜನ, ಲಕ್ಷ್ಮಪ್ಪ ಹೆಬಲಿ, ಬಸಪ್ಪ ಹರಿಜನ, ಕುಶಾಲ ಹೆಬಲಿ, ರೇಣವ್ವ ಹರಿಜನ, ಇತರರು ಎಚ್ಚರಿಕೆ ನೀಡಿದ್ದಾರೆ.

ಪದವೀಧರ ಮತಕ್ಷೇತ್ರದ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಆಗದು. ಚುನಾವಣೆ ಮುಗಿದ ನಂತರ ಕಾಮಗಾರಿ ಆರಂಭಿಸಲಾಗುವುದು. | ಅಮರೇಶ ಲಮಾಣಿ ಗ್ರಾಪಂ ಪಿಡಿಒ, ವಡವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net