ಬೆಲ್ಲದಾರಹಟ್ಟಿಯಲ್ಲಿ ಸ್ವಚ್ಛತೆಯೇ ಮಾಯ

K HALLI BELLADARAHATTI RPOBLEM.
Published on

ಕೊಂಡ್ಲಹಳ್ಳಿ: ಸಮೀಪದ ಬೆಲ್ಲದಾರಹಟ್ಟಿಯಲ್ಲಿ ಸ್ವಚ್ಛತೆಯೇ ಮರೀಚಿಕೆಯಾಗಿದೆ. ಇಲ್ಲಿನ ಗ್ರಾಮಸ್ಥರು ದಶಕಗಳಿಂದಲೂ ಇದೇ ಸಮಸ್ಯೆ ಅನುಭವಿಸುತ್ತಿದ್ದಾರೆ. ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ.
ಗ್ರಾಮದ ಎಲ್ಲ ರಸ್ತೆಗಳಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯ. ಮನೆಗಳ ತ್ಯಾಜ್ಯ, ಕಲ್ಮಶಗಳು ರಸ್ತೆಗಳ ಮೇಲೆಯೇ ಹರಿಯುತ್ತಿದೆ ವೆ. ಇರುವ ಒಂದು ಚರಂಡಿಯಲ್ಲಿ ಸದಾ ತ್ಯಾಜ್ಯ ತುಂಬಿಕೊಂಡು ದುರ್ವಾಸನೆ ಬೀರುತ್ತಿದೆ. ಮೂಗು ಮುಚ್ಚಿಕೊಂಡೇ ಸಂಚರಿಸುವ ಸ್ಥಿತಿ ಇದೆ. ಇನ್ನು ಮಳೆಗಾಲದಲ್ಲಂತೂ ರಸ್ತೆಗಳು ಕೆಸರುಮಯ. ಇದರಿಂದ ಸೊಳ್ಳೆಗಳ ಕಾಟಕ್ಕೆ ಇಲ್ಲಿನ ಜನತೆ ರೋಸಿ ಹೋಗಿದ್ದಾರೆ. ಮನೆಗಳಲ್ಲಿ ಫ್ಯಾನ್ ಇರದಿದ್ದರೆ ನಿದ್ರೆ ಎಂಬುದೇ ಇಲ್ಲಿನ ಜನರಿಗೆ ಗಗನಕುಸುಮ.
ಗ್ರಾಮದಲ್ಲಿ ಇರುವಂತಹ ಒಂದೇ ಒಂದು ಮಾರ್ಗದ ಚರಂಡಿ ಸ್ವಚ್ಛತೆ ಕೂಡ ಮಾಯವಾಗಿದ್ದು, ತಿಂಗಳು ಕಳೆದರೂ ಸ್ವಚ್ಛತೆಗೆ ಯಾರೂ ಇತ್ತ ಮುಖ ಮಾಡುತ್ತಿಲ್ಲ. ಗ್ರಾಮದ ರಸ್ತೆಗಳ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆಯಿಲ್ಲದೇ ಇಲ್ಲಿನ ಸಮಸ್ಯೆ ವಿಕೋಪಕ್ಕೆ ಹೋಗಿದ್ದು, ಇದು ಇಂದು, ನಿನ್ನೆಯದಲ್ಲ. ದಶಕಗಳ ಸಮಸ್ಯೆ ಎನ್ನುತ್ತಾರೆ ಗ್ರಾಮದ ನಿವಾಸಿ ಆನಂದ್.
ಗ್ರಾಮದ ಜನಪ್ರತಿನಿಧಿಗಳು, ಸಂಬಂಧಿಸಿದ ಅಧಿಕಾರಿಗಳು ಧಾವಿಸಿ ಆರೋಗ್ಯಯುತ ವಾತಾವರಣ ಕಲ್ಪಿಸಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ನಾನು ಇತ್ತೀಚೆಗೆ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ಬೆಲ್ಲದಾರಹಟ್ಟಿಯಲ್ಲಿ ಸ್ವಚ್ಛತೆ ಕೆಲಸ ಮಾಡುವ ಸಿಬ್ಬಂದಿಗೆ ಒಂದು ವರ್ಷದಿಂದ ಸಂಬಳ ನೀಡಿಲ್ಲ. ನಾನು ಕೆಲಸದ ಬಗ್ಗೆ ಕೇಳಿದರೆ ಒಂದು ವರ್ಷದಿಂದ ಸಂಬಳ ಕೊಟ್ಟಿಲ್ಲ ಎನ್ನುತ್ತಾರೆ. ಜಿ.ಪಂ. ಅನುಮೋದನೆಯಿಂದ ಹೊರಗಿರುವ ಇವರಿಗೆ ಪಂಚಾಯಿತಿಯಿಂದಲೇ ಸಂಬಳ ಕೊಡಬೇಕಿದೆ. ಆದಷ್ಟು ಬೇಗ ಸಂಬಳ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು.
ಹನುಮಂತರಾಜು, ಗೌರಸಮುದ್ರ ಗ್ರಾಪಂ ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net