ಬೆಲೆ ಕುಸಿತಕ್ಕೆ ತಂಬಾಕು ಬೆಳೆಗಾರರ ಆಕ್ರೋಶ

21ark2
Published on

ಅರಕಲಗೂಡು: ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಮಂಗಳವಾರ ಬೆಲೆ ಕುಸಿತದಿಂದ ರೊಚ್ಚಿಗೆದ್ದ ರೈತರು ಕೆಲಕಾಲ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿದ್ದರು.


ಮಾರುಕಟ್ಟೆಯ ಪ್ಲಾಟ್ 7ರಲ್ಲಿ 340 ಹೊಗೆಸೊಪ್ಪು ಬೇಲ್‌ಗಳು ಆವಕವಾಗಿದ್ದವು. ಬೆಳಗ್ಗೆ 9 ಗಂಟೆಗೆ ಹರಾಜು ಪ್ರಕ್ರಿಯೆ ಶುರುವಾಯಿತು. ಗುಣಮಟ್ಟದ ಕೆಲವು ಬೇಲ್‌ಗಳಿಗೆ ಒಂದು ಕೆಜಿಗೆ 210 ರೂ.ನಂತೆ ಬಿಡ್ ಮಾಡಲಾಯಿತು. 240 ರೂ.ಗೆ ಮಾರಾಟ ಮಾಡುತ್ತಿದ್ದ ತಂಬಾಕು ಒಂದು ಕೆಜಿಗೆ 30 ರೂ. ಕುಸಿತ ಮಾಡಲಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳು ಮತ್ತು ವರ್ತಕರೊಂದಿಗೆ ವಾಗ್ವಾದಕ್ಕಿಳಿದರು. ಪರಿಣಾಮವಾಗಿ ಕೆಲಕಾಲ ಹರಾಜು ಪ್ರಕ್ರಿಯೆ ಬಂದ್ ಮಾಡಲಾಯಿತು. ನಂತರ ಹರಾಜು ಅಧೀಕ್ಷಕ ಐಸಾಕ್ ಸೊರೆನ್ ದತ್ ಅವರು ರೈತರೊಂದಿಗೆ ಮಾತುಕತೆ ನಡೆಸಿ ಮನವೊಲಿಸಿದ ನಂತರ ಹರಾಜು ಪ್ರಕ್ರಿಯೆ ಪುನರಾರಂಭಗೊಳಿಸಲಾಯಿತು.


ಈ ಬಾರಿ ಹರಾಜು ಪ್ರಕ್ರಿಯೆ ಶುರುವಾದ ಆರಂಭದಲ್ಲಿ ಒಂದು ಕೆಜಿ ತಂಬಾಕು 270 ರೂ.ಗೆ ಮಾರಾಟವಾಗಿತ್ತು. ಇದೀಗ 210 ರೂ.ಗೆ ಕೊಳ್ಳಲಾಗುತ್ತಿದೆ. ಅತಿವೃಷ್ಟಿಯಿಂದ ಇಳುವರಿ ಕುಂಠಿತಗೊಂಡಿದ್ದು ಈಗ ಮಾರುಕಟ್ಟೆಯಲ್ಲಿಯೂ ಸ್ಥಿರ ಬೆಲೆ ಕಾಪಾಡಿಕೊಳ್ಳದೆ ಕೈ ಸುಟ್ಟುಕೊಳ್ಳುವಂತಾಗಿದೆ. ಮಾರುಕಟ್ಟೆಯಲ್ಲಿ ರೈತರ ಬೆಲೆ ನಷ್ಟದ ಗೋಳು ಕೇಳುವವರೇ ಇಲ್ಲವಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net